ನವದೆಹಲಿ:ಪೆನ್‌ಡ್ರೈವ್, ಸಿ.ಡಿ. ಫ್ಯಾಕ್ಟರಿ ಮಾಲಿಕರೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಇಕ್ಕಳಕ್ಕೆ ಸಿಲುಕಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಬಹಳ ದಿನಗಳ ನಂತರ ನವದೆಹಲಿಯ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲಿ ಯಾರನ್ನು ಗುರಿಯಾಗಿಟ್ಟುಕೊಂಡು ಸಿ.ಡಿ. ಮತ್ತು ಪೆನ್‌ಡ್ರೈವ್ ಬಗ್ಗೆ ಮಾತನಾಡಿದರೋ ಅವರೇ ಇವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರನ್ನು ಎಲ್ಲೂ ಪ್ರಸ್ತಾಪಿಸದೆ ವಾಗ್ದಾಳಿ ಮಾಡಿದರು.
ಅಡ್ಡಿ ಬರುವವರಿಗೆ ಖೆಡ್ಡಾ
ಮುಖ್ಯಮಂತ್ರಿ ಆಗಲು ಟವೆಲ್ ಹಾಕಿಕೊಂಡಿರುವ ಈ ಮಹಾನ್ ನಾಯಕ ತಮ್ಮ ಉದ್ದೇಶಕ್ಕೆ ಅಡ್ಡಿ ಬರುವ ಎಲ್ಲರನ್ನೂ ಒಂದಲ್ಲಾ ಒಂದು ರೀತಿ ಖೆಡ್ಡಾಕ್ಕೆ ಬೀಳಿಸುತ್ತಾರೆ.
ದಲಿತ ಮುಖಂಡ ಮತ್ತು ಅನುಭವಿ ರಾಜಕಾರಣಿ ಡಾ.ಪರಮೇಶ್ವರ್ ಮುಖ್ಯಮಂತ್ರಿ ರೇಸ್‌ನಲ್ಲಿದ್ದರು, ಅವರು ಇದನ್ನು ಹೇಳಿಕೊಂಡೂ ಇದ್ದರು.
ಅಷ್ಟೇ ಅಲ್ಲ, ಪರಿಶಿಷ್ಟ ಜಾತಿ, ಪಂಗಡದ ಶಾಸಕರು, ಸಚಿವರ ಸಂಘಟನೆ ಮಾಡಿ ದಲಿತರ ಬೃಹತ್ ಸಮಾವೇಶ ನಡೆಸಲೂ ಹೊರಟಿದ್ದರು.
ಚಿನ್ನ ಸ್ಮಗ್ಲಿಂಗ್ ಮಾಹಿತಿ ಸೋರಿಕೆ
ಮುಖ್ಯಮಂತ್ರಿ ಗಾದಿಯ ಪ್ರಮುಖ ರೇಸ್‌ನಲ್ಲಿದ್ದ ಡಾ.ಪರಮೇಶ್ವರ್ ನಡೆ ಸಹಿಸಿಕೊಳ್ಳದೆ, ದುಬೈನಿಂದ ಮಹಿಳೆ ಚಿನ್ನ ತರುವ ಮಾಹಿತಿ ಸೋರಿಕೆ ಮಾಡಿದ್ದೇ ಈ ಪ್ರಭಾವೀ ನಾಯಕ, ಆಕೆ ದುಬೈನಿಂದ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದಾಳೆ ಎನ್ನುವ ವಿಚಾರ ಈ ಪ್ರಭಾವೀ ನಾಯಕನಿಗೆ ಹೇಗೆ ಗೊತ್ತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಗುಪ್ತಚರ ವಿಭಾಗ ಇದೆಯಲ್ಲ, ಅವರಿಗೆ ಈ ವಿಷಯ ಗೊತ್ತಿಲ್ಲವೇ, ಆ ಮಹಿಳೆ ವಿಮಾನ ನಿಲ್ದಾಣದ ಮೂಲಕ ಚಿನ್ನ ತರುತ್ತಿರುವ ಮಾಹಿತಿ ಕೊಟ್ಟಿದ್ದೇ ಈ ಪ್ರಭಾವಿ ನಾಯಕ.
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಮಾಡುವ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿ ಪರೋಕ್ಷವಾಗಿ ಡಾ.ಪರಮೇಶ್ವರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ದಲಿತ ನಾಯಕರ ಮುಗಿಸಲು ಕುತಂತ್ರ
ದಲಿತ ನಾಯಕರನ್ನು ಮುಗಿಸಲು ಕುತಂತ್ರ ಮಾಡುತ್ತಿರುವ ಮಹಾನಾಯಕನೇ ಡಾ.ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ.
ದಲಿತ, ಹಿಂದುಳಿದ ವರ್ಗದ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಗಮನಿಸಿದ್ದೇನೆ, ಡಾ.ಪರಮೇಶ್ವರ್ ಇಂಥ ಸಂಕಷ್ಟಕ್ಕೆ ಒಳಗಾಗಲು ಕಾಂಗ್ರೆಸ್ ಪಕ್ಷದ ಆ ಪ್ರಭಾವೀ ನಾಯಕನೇ ಕಾರಣ ಎಂದು ನೇರ ಆರೋಪ ಮಾಡಿದರು.
ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ, ಮೇಲಾಗಿ ಕಾಂಗ್ರೆಸ್‌ನಲ್ಲಿ ಯಾರು ಯಾರಿಗೆ ಗುನ್ನ ಹೊಡೆಯುತ್ತಿದ್ದಾರೆ ಎನ್ನುವ ಮಾಹಿತಿ ಎಲ್ಲರಿಗೂ ತಿಳಿದಿದೆ.
ಕಾಂಗ್ರೆಸ್‌ನಲ್ಲಿ ರಾಜಕೀಯ ಮೇಲಾಟ
ರಾಜ್ಯ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲಾ ರಾಜಕೀಯ ಮೇಲಾಟ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ವ್ಯರ್ಥ ಪ್ರಯತ್ನ ನಡೆಯುತ್ತಿದೆ, ಕಾಂಗ್ರೆಸ್ ಪಕ್ಷದ ಪ್ರಭಾವೀ ನಾಯಕನಿಂದಲೇ ಇದೆಲ್ಲಾ ನಡೆದಿದೆ.
ಅದೆಷ್ಟೋ ಎಸ್‌ಐಟಿ, ಕಮಿಟಿ, ಸಮಿತಿ ಎಲ್ಲಾ ಮಾಡಿದ್ದೀರಲ್ಲ ಅವೆಲ್ಲಾ ಏನಾದವು, ಬಾಯಿ ಬಿಟ್ಟರೆ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ, ಆದರೆ, ನುಡಿದಂತೆ ನಡೆಯಲು ಎಷ್ಟು ತೆರಿಗೆ ಹಾಕಿದ್ದಾರೆ.
ಕೇಂದ್ರ ಗೃಹ ಸಚಿವ ಪ್ರಲ್ಹಾದ್ ಜೋಷಿ ನಿನ್ನೆಯಷ್ಟೇ, ದಲಿತ ನಾಯಕ ಡಾ.ಪರಮೇಶ್ವರ್ ವಿರುದ್ಧ ಇ.ಡಿ.ಗೆ ದಾಖಲೆ ಸಹಿತ ದೂರು ನೀಡಿ ಅವರನ್ನು ರಾಜ್ಯ ಕಾಂಗ್ರೆಸ್ ಮುಖಂಡರೇ ಸಂಕಷ್ಟಕ್ಕೆ ಸಿಲುಕಿಸಿದ್ದಾರೆಂದು ಆರೋಪಿಸಿದ ಬೆನ್ನಲ್ಲೇ ಕುಮಾರಸ್ವಾಮಿ ಈ ಮಾಹಿತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
