ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ
ಬೆಂಗಳೂರು: ಮಹಾ ಮಾರಿ ಕೋವಿಡ್ ಸೋಂಕು ರಾಜ್ಯದಲ್ಲಿ ಮತ್ತೆ ಉಲ್ಬಣಗೊಳ್ಳುತ್ತಿದ್ದು, ಎಂತಹುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸರ್ವ ಸನ್ನದ್ಧವಾಗಿರುವಂತೆ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಗೆ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಕಾವೇರಿ ನಿವಾಸದಲ್ಲಿ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ರಾಜ್ಯದಲ್ಲಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಧಿಕಾರಿಗಳು, ತಜ್ಞರು ಮತ್ತು ಸಚಿವರುಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಎಲ್ಲಾ ಸವಲತ್ತು, ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೋನಾ ಸಹಾಯವಾಣಿ ಪ್ರಾರಂಭ ಮಾಡಲು ಸೂಚನೆ ನೀಡಿದರು .
ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದರೆ
ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ತಪಾಸಣಾ ಘಟಕಗಳನ್ನು ಪ್ರಾರಂಭಿಸಲು ಕ್ರಮ ವಹಿಸುವಂತೆ ನಿರ್ದೇಶಿಸಿದರು.

ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಇರಬಾರದು. ಎಲ್ಲಾ ಜಿಲ್ಲಾ ಆಸ್ಪತ್ರೆಗಳೂ ಸರ್ವ ಸನ್ನದ್ಧವಾಗಿ ಇರುವಂತೆ ಸೂಚಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಈಗಾಗಲೇ ಪಾಲಿಸುತ್ತಿದ್ದೇವೆ. ರೂಪಾಂತರಿ ಕೊರೊನಾ ವೈರಾಣುವಿಗೆ ಸಂಬಂಧಿಸಿದಂತೆ ರೋಗ ನಿಯಂತ್ರಣ ಮುನ್ನೆಚ್ಚರಿಕೆಯಾಗಿ ವ್ಯಾಕ್ಸಿನ್ ಗಳನ್ನು ಸಿದ್ದವಾಗಿಟ್ಟು ಕೊಳ್ಳಲು ನಿರ್ದೇಶನ ಮಾಡಿದರು.
ಸಾಮಾಜಿಕ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ
ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಿದರು.
ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಿ. ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಲು ಸೂಚಿಸಿದರು.
ಪ್ರತೀ ವಾರ ಅಥವಾ ಅಗತ್ಯ ಬಿದ್ದರೆ ಮೂರು ದಿನಕ್ಕೊಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಾ ತೀವ್ರ ನಿಗಾ ಇಡಬೇಕು. ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ, ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ಅವರು ಸಲಹೆ ಮಾಡಿದರು.
ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಆರೋಗ್ಯಕರ, ಶಾಲೆಗಳೂ ಈ ಬಗ್ಗೆ ಗಮನ ಹರಿಸಿ ಶೀತ, ನೆಗಡಿ ಇರುವ ಮಕ್ಕಳನ್ನು ವಾಪಾಸ್ ಪೋಷಕರ ಮೂಲಕ ಮನೆಗೆ ಕಳುಹಿಸಬೇಕು.
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರಿಂದ ಮಾಹಿತಿ ಪಡೆದ ಅವರು, ಕಳೆದ ಜನವರಿಯಿಂದಲೂ
ಕೊರೊನಾ ಪ್ರಕರಣಗಳು ಅಲ್ಲಲ್ಲಿ ಒಂದೂ ಎರಡು ಕಂಡುಬರುತ್ತಿದ್ದು, ಮೇ ತಿಂಗಳಲ್ಲಿ ಉಲ್ಬಣವಾಗಿದ್ದು ಮೇ ತಿಂಗಳ ನಾಲ್ಕನೇ ವಾರಕ್ಕೆ 62 ಪ್ರಕರಣಗಳು ವರದಿಯಾಗಿವೆ. ಆದರೆ ಗಂಭೀರ ಎನ್ನುವಂತಹ ಪ್ರಕರಣಗಳ ಸಂಖ್ಯೆ ಒಂದು ಮಾತ್ರ ಇದೆ ಎಂದರು.
ಸಾರಿ ಪ್ರಕರಣಗಳಲ್ಲಿ ತಪಾಸಣೆ ಕಾರ್ಯ ಈಗಾಗಲೇ ನಡೆಯುತ್ತಿದೆ. ನೆರೆಯ ರಾಜ್ಯಗಳಾದ ಕೇರಳದಲ್ಲಿ 95, ತಮಿಳು ನಾಡಿನಲ್ಲಿ 66, ಮಹಾರಾಷ್ಟ್ರ ಗಳಲ್ಲಿ 56 ಪ್ರಕರಣಗಳು ವರದಿಯಾಗಿವೆ.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ,
ಎಂತಹುದೇ ಪರಿಸ್ಥಿತಿ ಎದುರಿಸಲು. ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ವೆಂಟಿಲೇಟರ್ ಸೇರಿದಂತೆ
ಮೂಲಭೂತ ಸೌಕರ್ಯಗಳು ಕಡ್ಡಾಯವಾಗಿರುವಂತೆ
ಕ್ರಮ ತೆಗೆದುಕೊಳ್ಳಬೇಕು. ಬಾಣಂತಿ ಹಾಗೂ ಮಕ್ಕಳ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು .

