ಬೆಂಗಳೂರು:ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಮತ್ತು ಹಾನಿ ಪ್ರದೇಶಗಳಿಗೆ ತಕ್ಷಣ ತೆರಳಿ ಪರಿಹಾರ ಉಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆದೇಶಿಸಿದ್ದಾರೆ.
ಭಾರೀ ಮಳೆ ಮತ್ತು ಪ್ರಹಾಹ ಪರಿಸ್ಥಿತಿ ಕುರಿತ ಸಮಗ್ರ ಅವಲೋಕನಕ್ಕೆ ಈ ತಿಂಗಳ 30 ಹಾಗೂ 31ರಂದು ಎಲ್ಲಾ ಜಿಲ್ಲಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಕರೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ತೀವ್ರ ಕಟ್ಟೆಚ್ಚರ ವಹಿಸಿ
ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತೀವ್ರ ಕಟ್ಟೆಚ್ಚರ ಮತ್ತು ನಿಗಾ ವಹಿಸಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಆದೇಶಿಸಿದರು.
ರಾಜ್ಯದ 170 ತಾಲ್ಲೂಕುಗಳನ್ನು ಪ್ರವಾಹ ಮತ್ತು ಭೂಕುಸಿತಕ್ಕೆ ಗುರಿಯಾಗುವ ತಾಲ್ಲೂಕುಗಳೆಂದು ಗುರುತಿಸಲಾಗಿದೆ, ಈ ತಾಲ್ಲೂಕುಗಳಲ್ಲಿ ಮುಂಜಾಗ್ರತೆಯಾಗಿ 2,296 ಕಾಳಜಿ ಅಥವಾ ಆಶ್ರಯ ತಾಣಗಳನ್ನು ಆರಂಭಿಸಲಾಗುವುದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಪ್ರದೇಶಗಳಾಗಿ ಗುರುತಿಸಲಾಗಿದೆ.
ಸಹಾಯಧನ ಪಾವತಿ
ಇತ್ತೀಚೆಗೆ ಸುರಿದ ಭಾರೀ ಮಳೆಗೆ ರಾಜ್ಯದಲ್ಲಿ 45 ಮನೆಗಳು ಸಂಪೂರ್ಣ ಹಾನಿಗೊಂಡಿವೆ, 1,385 ಮನೆಗಳಿಗೆ ಭಾಗಶಃ ಹಾನಿಯಾಗಿವೆ, ಶೇ.99ರಷ್ಟು ಪ್ರಕರಣಗಳಲ್ಲಿ ಸಹಾಯಧನ ಪಾವತಿಸಲಾಗಿದೆ.
ವಿಪತ್ತು ನಿರ್ವಹಣೆಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಿ.ಡಿ. ಖಾತೆಯಲ್ಲಿ 97,351.95 ಲಕ್ಷ ರೂ. ಅನುದಾನ ಲಭ್ಯವಿದೆ ಎಂದರು.
ನಗರದ ಟೌನ್‌ಹಾಲ್‌ನಲ್ಲಿ ನಡೆದ “ಜೈ ಹಿಂದ್ ಸಭಾ”ದಲ್ಲಿ ನಿವೃತ್ತ ಭಾರತೀಯ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಸೈನಿಕರು, ರೈತರು, ವೈದ್ಯರು, ಶಿಕ್ಷಕರು ತಂದೆ ತಾಯಿಯಷ್ಟೇ ಸ್ಮರಣೀಯರು ಎಂದರು.
ಭಾರತೀಯರ ಜವಾಬ್ದಾರಿ
ಯೋಧರು ತ್ಯಾಗ ಮನೋಭಾವದಿಂದ ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ, ದೇಶದ ರಕ್ಷಣೆ 140 ಕೋಟಿ ಭಾರತೀಯರ ಜವಾಬ್ದಾರಿ.
ಶಿಷ್ಟ ರಕ್ಷಣೆ, ದುಷ್ಟರ ಸಂಹಾರ ಕಾರ್ಯದಲ್ಲಿ ಭಾರತ ಎಂದೂ ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳುವುದಿಲ್ಲ, ಇದು ಪ್ರತಿಯೊಬ್ಬ ಭಾರತೀಯನ ಬದ್ಧತೆಯಾಗಿದೆ.
ಯೋಧರ ಕ್ಯಾಂಟೀನ್‌ಗೆ ಅಬಕಾರಿ ಸುಂಕ ಹಾಕುವುದಿಲ್ಲ ಎಂಬುದಾಗಿ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರಲ್ಲದೆ, ನಿವೃತ್ತ ಯೋಧರ ಕಲ್ಯಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

