ಬೆಂಗಳೂರು:ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅವಕಾಶ ಸಿಕ್ಕರೆ ಎಲ್ಲರ ಪ್ರತಿಭೆಯೂ ಹೊರಹೊಮ್ಮುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಆಡುಗೋಡಿಯ ಕರ್ನಾಟಕ ಸರ್ಕಾರಿ ಕನ್ನಡ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪುನರಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವರಿಗೂ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿ, ಶಿಕ್ಷಣ ಕೇವಲ ಜ್ಞಾನ ಕೊಡುವುದಿಲ್ಲ, ವ್ಯಕ್ತಿತ್ವ ರೂಪಿಸುತ್ತದೆ, ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು, ಇದರಿಂದ ಸ್ವಾಭಿಮಾನ ಬೆಳೆದು ಸಮಾಜದ ಆಸ್ತಿಯಾಗುತ್ತೇವೆ ಎಂದರು.
ಸಂವಿಧಾನವನ್ನು ಎಲ್ಲರೂ ಪಾಲಿಸಬೇಕು
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದೇಶ ಕಂಡ ಮಹಾನ್ ವಿದ್ವಾಂಸರಲ್ಲಿ ಒಬ್ಬರು, ಅವರು ಕೊಟ್ಟಂತಹ ಸಂವಿಧಾನವನ್ನು ಎಲ್ಲರೂ ಪಾಲಿಸಬೇಕು, ಜಾತಿ, ವರ್ಗ ಮುಕ್ತ ಸಮ ಸಮಾಜ ನಿರ್ಮಾಣ ಆಗಬೇಕು ಎನ್ನುವುದು ಅವರ ಆಶಯವಾಗಿತ್ತು.
ನಾನು 1992-93ರಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ಒಂದು ಲಕ್ಷ ಶಿಕ್ಷಕರ ನೇಮಕ ಮಾಡಲು ಅನುಮೋದನೆ ನೀಡಿದ್ದೆ.
ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶ ಸಿಕ್ಕರೆ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ಓದಲು ಸಾಧ್ಯ, ಇದಕ್ಕಾಗಿಯೇ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಹಾಲು ಕೊಡುತ್ತಿದ್ದೇವೆ, ಜೊತೆಗೆ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕಗಳನ್ನೂ ಸರ್ಕಾರದಿಂದಲೇ ಕೊಡುತ್ತಿದ್ದೇವೆ ಎಂದರು.
ರಾಜನಾಗಿ ರೂಪುಗೊಳ್ಳಬಹುದು
ಅಯ್ಯಪ್ಪ ಗಾರ್ಡನ್‌ನ ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಕ್ಕಳು ಚೆನ್ನಾಗಿ ಓದಿದರೆ ಎಲ್ಲಾ ರಂಗದಲ್ಲೂ ರಾಜನಾಗಿ ರೂಪುಗೊಳ್ಳಬಹುದು, ಇಲ್ಲವಾದರೆ ಸೇವಕನಾಗಿ ಇರಬೇಕಾಗುತ್ತದೆ, ಇವೆರಡರ ಆಯ್ಕೆ ನಿಮ್ಮದು, ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ ಎಂದು ಕಿವಿಮಾತು ಹೇಳಿದರು.
ಇಷ್ಟು ದಿನ ಮಕ್ಕಳು ರಜೆಯಲ್ಲಿ ನಲಿದಾಡಿದ್ದೀರಿ, ನಲಿಯುವುದರ ಜೊತೆಗೆ ಕಲಿಯಿರಿ, ಶಾಲೆಗಳಿಗೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಕಳೆದ ವರ್ಷ ಬಾಗಲಕೋಟೆ ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರು, ಈ ವರ್ಷ ಬೆಳಗಾವಿಯ ಬೈಲಹೊಂಗಲದ ದೇವಲಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರೂಪಾ ಪಾಟೀಲ್ ಅಗ್ರಸ್ಥಾನ ಪಡೆದಿದ್ದಾರೆ, 10ನೇ ತರಗತಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಿಗೆ ಸರ್ಕಾರ ಅಭಿನಂದಿಸುತ್ತಿದೆ.
ಶಿಕ್ಷಣದ ಫಲ ಸಿಹಿಯಾಗಿರುತ್ತದೆ
ಸರ್ಕಾರಿ ಶಾಲೆ ಮಕ್ಕಳಿಗೆ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು, ಶಿಕ್ಷಣದ ಬೇರು ಕಹಿಯಾಗಿದ್ದರೂ ಫಲ ಸಿಕ್ಕಾಗ ಬಹಳ ಸಿಹಿಯಾಗಿರುತ್ತದೆ.
ಜೀವನದಲ್ಲಿ ಯಶಸ್ಸು ಸಾಧಿಸಲು ಕನಸು ಕಾಣಬೇಕು, ಕನಸು ಈಡೇರಿಸಿಕೊಳ್ಳಲು ಬಯಸಬೇಕು, ಕನಸಿಗಾಗಿ ಬದ್ಧತೆ, ಶಿಸ್ತು ಇರಬೇಕು, ಉದ್ಯೋಗ ಪಡೆಯುವುದಷ್ಟೇ ಕನಸಾಗಬಾರದು, ಬೇರೆಯವರಿಗೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ಬೆಳೆಯುವುದು ನಿಮ್ಮ ಕನಸಾಗಬೇಕು.
ದೇಶದಲ್ಲಿ ಅತಿಹೆಚ್ಚು ಇಂಜಿನಿಯರ್‌ಗಳು, ವೈದ್ಯರು, ಮಾನವ ಸಂಪನ್ಮೂಲ ವ್ಯಕ್ತಿಗಳು ವಿದ್ಯಾಲಯಗಳಿಂದ ಹೊರಬರುತ್ತಿರುವುದು ಕರ್ನಾಟಕದಲ್ಲಿ, ಎಲ್ಲಾ ದೇಶಗಳಿಂದ ಬೆಂಗಳೂರಿಗೆ ಬಂದು ವ್ಯಾಸಂಗ ಮಾಡುತ್ತಿದ್ದಾರೆ, ಐಟಿ-ಬಿಟಿ, ಸಂಶೋಧನೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಬೆಂಗಳೂರು ಯಶಸ್ಸು ಸಾಧಿಸಿದೆ.
ಪದವಿ ಪಡೆದಾಗ ಹೆಚ್ಚು ಸಂತೋಷ
ನಾನು ವಿದ್ಯಾರ್ಥಿಯಾಗಿದ್ದಾಗ ರಾಜಕೀಯ ಪ್ರವೇಶಿಸಿದ್ದು, ಶಿಕ್ಷಣಕ್ಕೆ ಹೆಚ್ಚು ಗಮನಹರಿಸಲು ಸಾಧ್ಯವಾಗಲಿಲ್ಲ, ಶಾಸಕನಾಗಿ ವಿಧಾನಸೌಧ ಪ್ರವೇಶಿಸಿದಾಗ ಹಿರಿಯ ನಾಯಕರ ಭಾಷಣ ಕೇಳಿ ನನಗೆ ವಿದ್ಯೆ ಕೊರತೆ ಇದೆ ಎಂಬ ಅರಿವಾಯಿತು, 47ನೇ ವಯಸ್ಸಿನಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದೆ, ಸಚಿವ ಸಂಪುಟ ಸದಸ್ಯನಾದಾಗ ಸಿಕ್ಕ ಸಂತೋಷಕ್ಕಿಂತ ಪದವಿ ಪಡೆದಾಗ ಹೆಚ್ಚು ಸಂತೋಷವಾಯಿತು ಎಂದರು.
ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸಲು 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ, ಖಾಸಗಿ ಸಂಸ್ಥೆಗಳನ್ನು ಒಳಗೊಂಡು ಶಿಕ್ಷಕರ ಕೊರತೆ ಪೂರೈಸಲಾಗುವುದು, ಅನೇಕ ಸಂಸ್ಥೆಗಳು ಈಗಾಗಲೇ ಪಂಚಾಯತ್ ಮಟ್ಟದಲ್ಲಿ ಶಾಲೆ ನಿರ್ಮಾಣಕ್ಕೆ ಮುಂದಾಗಿವೆ, ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಮಾದರಿ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.

