ಬೆಂಗಳೂರು:ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಬೆನ್ನಲ್ಲೇ ಆಂತರಿಕವಾಗಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷದ ವರಿಷ್ಠರು ದೆಹಲಿಗೆ ಬುಲಾವ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡು ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮುಂದಾಗಿದ್ದಾರೆ.
ಎಐಸಿಸಿ ಸೂಚನೆ
ಮೇ 31 ಇಲ್ಲವೇ ಜೂನ್ 5ರಂದು ಬಿಡುವು ಮಾಡಿಕೊಂಡು ದೆಹಲಿಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಸೂಚಿಸಿದೆ.
ವಿಧಾನ ಪರಿಷತ್‌ನಲ್ಲಿ ತೆರವಾಗಿರುವ ಸ್ಥಾನಗಳ ಭರ್ತಿ ಹಾಗೂ ಪರಿಷತ್‌ನಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕಿದ್ದು, ಸಭಾಪತಿ ಮತ್ತು ಉಪಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ವರಿಷ್ಠರೊಂದಿಗೆ ಚರ್ಚೆ ನಡೆಸಿ, ಹೆಸರು ಅಂತಿಮಗೊಳಿಸಲು ಮುಂದಾಗಿದ್ದಾರೆ.
ಇದೂ ಸೇರಿದಂತೆ ಕೆಲವು ರಾಜಕೀಯ ನೇಮಕಾತಿಗೆ ಸಂಬಂಧಿಸಿದಂತೆ ವರಿಷ್ಠರೊಂದಿಗೆ ಮಾತುಕತೆಗೆ ಮುಖ್ಯಮಂತ್ರಿ ದೆಹಲಿ ಪ್ರಯಾಣ ಬಯಸಿದ್ದರು.
ಸೋನಿಯಾ ಗಾಂಧಿ ಭೇಟಿ
ಈ ಮಧ್ಯೆ ಸೋನಿಯಾ ಗಾಂಧಿ ಅವರೇ ಮುಖ್ಯಮಂತ್ರಿ ಭೇಟಿ ಮಾಡಲು ಆಸಕ್ತಿ ತೋರಿದ್ದರಿಂದ ಎಐಸಿಸಿ ಕಚೇರಿ ಮುಖ್ಯಮಂತ್ರಿ ಅವರಿಗೆ ದೆಹಲಿಗೆ ಬರುವಂತೆ ಹೇಳಿದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಇಲಾಖಾ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡಿರುವುದನ್ನು ಪರೋಕ್ಷವಾಗಿ ಆಕ್ಷೇಪಿಸಿ ಮುಖ್ಯಕಾರ್ಯದರ್ಶಿ ಅವರಿಗೆ ಮೇ 13 ರಂದು ಪತ್ರ ಬರೆದಿರುವುದು ಪಕ್ಷದಲ್ಲಿ ಸಂಚಲನ ಮೂಡಿಸಿದೆ.
ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ, ಸಣ್ಣ ಕಾರ್ಯಕ್ರಮ ನೆಪವಾಗಿಟ್ಟುಕೊಂಡು ಕರ್ನಾಟಕಕ್ಕೆ ದೌಢಾಯಿಸಿ ಶಿವಕುಮಾರ್ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದರು.
ಖರ್ಗೆ ನಿವಾಸಕ್ಕೆ ದೌಢು
ನಂತರ ಬೆಂಗಳೂರಿನಲ್ಲೇ ಇದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಶಿವಕುಮಾರ್ ಅವರನ್ನು ಜೊತೆಯಲ್ಲಿ ಕರೆದೊಯ್ದ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ, ಎರಡು ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದರು.
ಈ ಮಾತುಕತೆ ನಂತರ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಬರುವಂತೆ ಎಐಸಿಸಿಯಿಂದ ಸಂದೇಶ ತಲುಪಿತು ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಅವರ ಅಧೀನದಲ್ಲಿ ಬರುವ ಡಿಪಿಎಆರ್ ಮೂಲಕ ಮುಖ್ಯಇಂಜಿನಿಯರ್‌ಗಳ ವರ್ಗಾವಣೆ ನಡೆಯಲಿದೆ.

ಶಿವಕುಮಾರ್ ಕೋಪ
ತಮ್ಮ ಗಮನಕ್ಕೆ ತಾರದೆ ಆರು ಮುಖ್ಯ ಇಂಜಿನಿಯರ್‌ಗಳನ್ನು ವರ್ಗವಣೆ ಮಾಡಿದ್ದು ಶಿವಕುಮಾರ್ ಕೋಪಕ್ಕೆ ಕಾರಣವಾಗಿದೆ.
ಶಿವಕುಮಾರ್ ತಮ್ಮ ಕೋಪವನ್ನು ಮುಖ್ಯಮಂತ್ರಿ ಮೇಲೆ ತೋರಿಸದೆ, ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಆಗಿರುವ ವರ್ಗಾವಣೆ ತಡೆಹಿಡಿಯಬೇಕು, ನನ್ನ ಇಲಾಖೆಗೆ ಒಳಪಡುವ ವಿಭಾಗಗಳಿಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಆದೇಶಕ್ಕೆ ನನ್ನ ಅನುಮತಿ ಬೇಕು ಎಂದಿದ್ದಾರೆ.
ಡಿಪಿಎಆರ್‌ನಿಂದ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆದ ನಂತರವೇ ಹೊರಡಿಸಬೇಕು.
ಟಿಪ್ಪಣಿ ಮೂಲಕ ಸೂಚನೆ
ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿ ಮೂಲಕ ನಿಮಗೆ ತಿಳಿಸಲಾಗಿತ್ತು.
ಅಲ್ಲದೆ, ಮುಖ್ಯ ಎಂಜಿನಿಯರ್‌ಗಳ ಕರ್ತವ್ಯಕ್ಕೆ ಸಂಬಂಧಿಸಿದ ಕಾರ್ಯವ್ಯಾಪ್ತಿಯನ್ನು ಜಲಸಂಪನ್ಮೂಲ ಇಲಾಖೆಯಿಂದ ಡಿಪಿಎಆರ್‌ಗೆ ವಹಿಸುವ ಕಡತದಲ್ಲಿಯೂ ಸೂಚನೆ ಕೊಡಲಾಗಿತ್ತು.
ನನ್ನ ಗಮನಕ್ಕೆ ತಂದು ನನ್ನ ಅನುಮೋದನೆ ಪಡೆದ ನಂತರವೇ ಡಿಪಿಎಆರ್‌ನಿಂದ ಆದೇಶ ಹೊರಡಿಸಬಹುದೆಂದು ಸ್ಪಷ್ಟ ಸೂಚನೆ ನೀಡಿದ್ದೇನೆ.
ಅನುಮೋದನೆ ಪಡೆದಿಲ್ಲ
ಆದಾಗ್ಯೂ, ಮೇ 9ರಂದು ಹೊರಡಿಸಿದ ಆದೇಶದಲ್ಲಿ ನನ್ನ ಅನುಮೋದನೆ ಪಡೆಯದೆ ಕೆಲವು ಮುಖ್ಯ ಎಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ.
ನನ್ನ ಸೂಚನೆ ಕಡೆಗಣಿಸಿ ಆದೇಶ ಹೊರಡಿಸಿರುವುದನ್ನು ಆಕ್ಷೇಪಿಸುತ್ತಿದ್ದೇನೆ, ಆದುದರಿಂದ ಈ ಆದೇಶವನ್ನು ಕೂಡಲೇ ವಾಪಸು ಪಡೆಯಬೇಕು, ಇಂತಹ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

