ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಜನರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕರಾವಳಿ ಜನರ ಕಣ್ಣುಗಳಲ್ಲಿ ಕಣ್ಣೀರ ಬದಲಿಗೆ ರಕ್ತ ಕಣ್ಣೀರು ಸುರಿಸಲು ಸರ್ಕಾರ ಹಪಾಹಪಿಸುತ್ತಿದೆ, ಕರಾವಳಿ ಭಾಗ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಧಾರಾಕಾರ ಮಳೆಯಿಂದ ಸಾಮಾನ್ಯ ಜನಜೀವನ ಛಿದ್ರಗೊಂಡಿದೆ.
ಸಂಕಷ್ಟದಲ್ಲಿ ಜನತೆ
ಸಂಕಷ್ಟದಿಂದ ಜನ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ, ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಜನತೆಯ ಕಣ್ಣೀರು ಒರೆಸುವ ಬದಲು ’ರಕ್ತ ಕಣ್ಣೀರು’ ಸುರಿಸುತ್ತಿದೆ ಎಂದಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಮನೆ, ರಸ್ತೆ, ಸೇತುವೆಗಳು ಕುಸಿದಿವೆ, ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನರ ಬದುಕು ದಿಕ್ಕಿಲ್ಲದಂತಾಗಿದೆ, ಸಂತ್ರಸ್ತರ ರಕ್ಷಣೆಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮವೇನು ಎಂದು ಪ್ರಶ್ನಿಸಿದ್ದಾರೆ.
ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಗಾದೆಯಂತೆ, ಮಳೆಯಲ್ಲಿ ಸಾಮಾನ್ಯ ಜನರ ಬದುಕು ಕೊಚ್ಚಿ ಹೋದ ಮೇಲೆ ಹಾನಿ ಪ್ರದೇಶಗಳಿಗೆ ಸಚಿವರಿಗೆ ಹೋಗಿ ಎಂಬುದಾಗಿ ಮುಖ್ಯಮಂತ್ರಿ ಅಪ್ಪಣೆ ಕೊಟ್ಟರೆ ಫಲವೇನು.
ಇದೇನಾ ನುಡಿದಂತೆ ನಡೆಯುವುದು
ಮಳೆ ಬರುವ ಮೊದಲು ಏನು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೀರಿ, ಇದೇನಾ ಜನಪರ ಆಡಳಿತ, ನುಡಿದಂತೆ ನಡೆಯುವುದು ಎಂದರೆ ಇದೇನಾ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕರಾವಳಿ ಮಳೆಯ ಚಿಂತೆ ಇಲ್ಲ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ, ಅದು ಕೊಲೆಗಳನ್ನು ಹತ್ತಿಕ್ಕಲು ಅಲ್ಲ, ಕೊಲೆಗಳಲ್ಲೂ ’ರಾಜಕೀಯ ಕೂಳು’ ಬೇಯಿಸಿಕೊಳ್ಳಲು ಹವಣಿಸುತ್ತಿದೆ.
ಸಿದ್ದರಾಮಯ್ಯ ನೀವು ಎರಡು ವರ್ಷದಿಂದ ಅಧಿಕಾರದಲ್ಲಿದ್ದೀರಿ, ವಿರೋಧ ಪಕ್ಷಗಳನ್ನು ದೂರುತ್ತಾ ಕಾಲಹರಣ ಮಾಡುತ್ತಿದ್ದೀರಿ, ನೀವು ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಎಷ್ಟು ಹತ್ಯೆಗಳಾದವು, ಅವನ್ನು ಏಕೆ ಹತ್ತಿಕ್ಕಲಿಲ್ಲ, ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ನೀಡಿದ ಸಮುದಾಯದ ರಕ್ಷಣೆಯಲ್ಲೂ ವಿಫಲರಾಗಿರುವುದಲ್ಲದೆ, ಇತರೆ ಕೋಮುಗಳ ಮೇಲೆ ವಿಷ ಕಾರುತ್ತಿದ್ದೀರಿ.
ವಿಷ ಸರ್ಪಗಳ ತೋಟ
ಸರ್ವ ಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದೀರಿ, ಸಿದ್ದರಾಮಯ್ಯನವರೇ, ನೀವು ಮತ್ತು ನಿಮ್ಮ ಸಂಗಡಿಗರ ಸದಾರಮೆ ನಾಟಕ ಸಾಕು, ಕೂಡಲೇ ಕರಾವಳಿಗೆ ಭೇಟಿ ನೀಡಿ, ಮಳೆ, ಕೊಲೆಗಳಿಂದ ತತ್ತರಿಸಿರುವ ಅಲ್ಲಿನ ಜನತೆಗೆ ಧೈರ್ಯ ತುಂಬಿ.
ಪ್ರಕೃತಿ ಪ್ರೇರಿತ ಮಳೆ ವಿಕೋಪ, ನಿಮ್ಮ ಪಕ್ಷ ಪ್ರೇಷಿತ ’ಕೊಲೆ ವಿಕೋಪ’ಕ್ಕೆ ಪರಿಹಾರ ಕಂಡುಕೊಳ್ಳಿ, ಮುಖ್ಯಮಂತ್ರಿಯಾಗಿ ಇದು ನಿಮ್ಮ ತಕ್ಷಣದ ಕರ್ತವ್ಯ ಎಂದಿದ್ದಾರೆ.

