ಬೆಂಗಳೂರು:ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಸೇದುವಂತಿಲ್ಲ, ತಂಬಾಕು, ಗುಟ್ಕಾ ಎಲ್ಲೆಂದರಲ್ಲಿ ಉಗುಳಿದರೆ ದಂಡ ವಿಧಿಸುವ ಕಾನೂನು ರಾಜ್ಯಾದ್ಯಂತ ತಡರಾತ್ರಿಯಿಂದಲೇ ಜಾರಿಗೊಂಡಿದೆ.
ತಂಬಾಕು, ಗುಟ್ಕಾ ತಿಂದು ಉಗುಳುವುದು ಹಾಗೂ ಸಿಗರೇಟ್ ಸೇದಿದರೆ ಒಂದು ಸಾವಿರ ರೂ.ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಹುಕ್ಕಾಬಾರ್ ತಕ್ಷಣವೇ ಮುಚ್ಚಬೇಕು
ರಾಜ್ಯದ ಯಾವುದೇ ಭಾಗದಲ್ಲಿ ಹುಕ್ಕಾ ಬಾರ್ ತೆರೆಯುವಂತಿಲ್ಲ, ಈಗಿರುವ ಹುಕ್ಕಾಬಾರ್‌ಗಳನ್ನು ತಕ್ಷಣವೇ ಮುಚ್ಚಬೇಕು, ಕಾನೂನಿಗೆ ವಿರುದ್ಧವಾಗಿ ನಡೆದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ಸಂಬಂಧದ ತಿದ್ದುಪಡಿ ಕಾನೂನಿಗೆ ರಾಷ್ಟ್ರಪತಿಗಳು ಅಂಗೀಕಾರ ನೀಡಿದ ತಕ್ಷಣವೇ ಸರ್ಕಾರ ನಿಯಮಾವಳಿ ರೂಪಿಸಿ ಆದೇಶ ಜಾರಿಗೊಳಿಸಿದೆ.
21 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ, ತಂಬಾಕು ಉತ್ಪನ್ನಗಳ ಸಾರ್ವಜನಿಕ ಜಾಹೀರಾತು ನೀಡುವಂತಿಲ್ಲ.
ಶಾಲೆ ಬಳಿ ಸಿಗರೇಟ್ ಮಾರುವಂತಿಲ್ಲ
ಶಾಲಾ-ಕಾಲೇಜುಗಳ ಆವರಣದಿಂದ 100 ಮೀಟರ್ ಸುತ್ತಳತೆ ಪ್ರದೇಶದಲ್ಲಿ ಬೀಡಿ, ಸಿಗರೇಟ್ ಹಾಗೂ ಬೆಂಕಿ ಪೊಟ್ಟಣ ಮಾರುವುದನ್ನು ನಿಷೇಧಿಸಲಾಗಿದೆ.
ಉಪಹಾರ ಗೃಹ, ಪಬ್, ಬಾರ್, ರೆಸ್ಟೋರೆಂಟ್ ಒಳಗೊಂಡಂತೆ ಯಾವುದೇ ಸ್ಥಳದಲ್ಲಿ ಹುಕ್ಕಾ ಬಾರ್ ತೆರೆಯುವಂತಿಲ್ಲ ಹಾಗೂ ನಡೆಸುವಂತಿಲ್ಲ.
ಕಾನೂನು ಉಲ್ಲಂಘಿಸಿದರೆ, ಒಂದು ವರ್ಷದಿಂದ ಮೂರು ವರ್ಷ ಜೈಲು ಹಾಗೂ 50,000 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ದಂಡ ತೆರಬೇಕಾಗುತ್ತದೆ.

