ಬೆಂಗಳೂರು:ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ನಾಯಕ ಎಚ್.ಡಿ.ದೇವೇಗೌಡ ಅವರ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರದಿಂದ ಮಾತನಾಡಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿ.ಕೆ ಶಿವಕುಮಾರ್ ಅವರೇ, 2023ರ ವಿಧಾನಸಭಾ ಚುನಾವಣೆ ಇತಿಹಾಸದ ಪುಟಗಳನ್ನೊಮ್ಮೆ ತಿರುಗಿಸಿ ನೋಡಿ, ನಂಬಿಕೆ ಮತ್ತು ವಿಶ್ವಾಸರ್ಹತೆ ಬಗ್ಗೆ ನೀವು ಮಾತನಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಿದೆ ಎಂದಿದ್ದಾರೆ.
ನಂಬಿದವರನ್ನು ಮಂತ್ರಿ ಮಾಡಲಿಲ್ಲ
ನಿಮ್ಮನ್ನು ನಂಬಿದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಮಂತ್ರಿ ಮಾಡಲಿಲ್ಲ, ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಏಕೈಕ ಶಾಸಕ ಶಿವಲಿಂಗೇಗೌಡ ಅವರನ್ನೂ ಮಂತ್ರಿ ಮಾಡಲಿಲ್ಲ, ಗುಬ್ಬಿ ಶಾಸಕರನ್ನು ಮಂತ್ರಿ ಮಾಡುವುದಿರಲಿ, ಅವರ ಪತ್ನಿ ಅವರನ್ನು ಡೇರಿ ಅಧ್ಯಕ್ಷರಾಗಿ ಮಾಡಲಾಗಲಿಲ್ಲ.
ರಾಮನಗರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರಂತೂ ಮಂತ್ರಿ ಆಗಲು ರೆಡಿ ಮಾಡಿಸಿದ್ದ ಸೂಟು-ಕೋಟುಗಳು ಮೂಲೆಗೆ ಬಿದ್ದು ಧೂಳು ತಿನ್ನುತ್ತಿವೆ.
ದೇವರೇ ರಕ್ಷಿಸಬೇಕು
ಇನ್ನು ನಿಮ್ಮ ವಿರುದ್ಧ ಮಾತನಾಡಿದ ಮುಖ್ಯಮಂತ್ರಿಗಳಿಗೆ ಮುಡಾ ಟ್ರ್ಯಾಪ್, ಸಚಿವರು, ದಲಿತ ಸಮಾಜದ ಡಾ.ಜಿ.ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹನಿಟ್ರ್ಯಾಪ್, ಇದೆಂಥಾ ವಿಶ್ವಾಸಾರ್ಹತೆ, ನಿಮ್ಮ ಹಿಟ್‌ಲಿಸ್ಟ್‌ನಲ್ಲಿರುವ ಕಾಂಗ್ರೆಸ್ ನಾಯಕರನ್ನು ದೇವರೇ ರಕ್ಷಿಸಬೇಕು.
ರಾಜಕೀಯವಾಗಿ ಗುದ್ದಾಡೋಣ, ಹೋರಾಟ ಮಾಡೋಣ, ಆರೋಗ್ಯಕರವಾಗಿ ಆಲೋಚನೆ ಮಾಡಿ, ಮುತ್ಸದ್ಧಿಯಾಗಿ ಬೆಳೆಯುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಿ, ಈ ರಾಷ್ಟ್ರ ಕಂಡ ಅಪರೂಪದ ನಾಯಕ ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ನಾಲಿಗೆ ಸ್ವಾಸ್ಥ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳಿ, ಮಾತಿನಲ್ಲಿ ಎಚ್ಚರ ಇರದಿದ್ದರೆ ನಿಮಗೇ ಮುಳುವಾಗಲಿದೆ ಎಂದು ಎಚ್ಚರಿಸಿದ್ದಾರೆ.

