ಬೆಂಗಳೂರು:ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತ ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ.
ತಾವು ಮಾಡದ ತಪ್ಪಿಗೆ ವಿರೋಧ ಪಕ್ಷ ಮತ್ತು ಸಾರ್ವಜನಿಕವಾಗಿ ತಮ್ಮ ಮೇಲೆ ಬಂದಿರುವ ಆರೋಪದಿಂದ ಡಾ.ಪರಮೇಶ್ವರ್ ತೀವ್ರ ನೊಂದಿದ್ದಾರೆ.
ಹಿತೈಷಿಗಳ ಜೊತೆ ಚರ್ಚೆ
ಕಳೆದ ಎರಡು ದಿನಗಳಿಂದ ತಮ್ಮ ಆಪ್ತ ಸ್ನೇಹಿತರು ಮತ್ತು ಹಿತೈಷಿಗಳ ಜೊತೆ ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನ ತೊರೆಯುವ ಮಾತನ್ನಾಡಿದ್ದಾರೆ.
ಗೃಹ ಸಚಿವನಾಗಿ ತಮಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಎಲ್ಲೋ ಒಂದೆಡೆ ಅಡ್ಡಿ ಎದುರಾಗುತ್ತಿವೆ ಎಂಬ ಸುಳಿವನ್ನು ತಮ್ಮ ಹಿತೈಷಿಗಳ ಮುಂದಿಟ್ಟಿದ್ದಾರೆ.
ಸಂಭ್ರಮಾಚರಣೆ ಬಗ್ಗೆ ನನಗೆ ಪೂರ್ಣ ಮಾಹಿತಿ ಇರಲಿಲ್ಲ, ಕಡೇ ಗಳಿಗೆಯಲ್ಲಿ ಮಾಹಿತಿ ಲಭ್ಯವಾದ ತಕ್ಷಣ ನಾನೇ ಖುದ್ದು ವಿಧಾನಸೌಧದ ಮೆಟ್ಟಿಲುಗಳ ಸ್ಥಳ ಪರಿಶೀಲನೆ ಮಾಡಿದೆ.
ಕ್ರೀಡಾಭಿಮಾನಿಗಳ ಜಮಾವಣೆ
ಈ ವೇಳೆ ಅಭಿಮಾನಿಗಳು ಸಂತಸದಿಂದ ಕ್ರೀಡಾಂಗಣ ಹಾಗೂ ಶಕ್ತಿಸೌಧದ ಸುತ್ತಮುತ್ತ ಭಾರೀ ಸಂಖ್ಯೆಯಲ್ಲಿ ಜಮಾಯಿಸಿರುವುದನ್ನು ಗಮನಿಸಿದೆ.
ನಾನು ಕಣ್ಣಾರೆ ನೋಡಿದ ಹಾಗೂ ಅಧಿಕಾರಿಗಳು ನನಗೆ ನೀಡಿದ ಮಾಹಿತಿ ಆಧಾರದ ಮೇಲೆ ವಿಧಾನಸೌಧದಿಂದ ಕೆಎಸ್‌ಸಿಎವರೆಗೆ ನಡೆಯಬೇಕಿದ್ದ ವಿಜಯೋತ್ಸವ ಯಾತ್ರೆಯನ್ನು ಬೇಡವೆಂದಿದ್ದೇ ನಾನು.
ವಿಜಯೋತ್ಸವ ರೋಡ್ ಶೋ ನಡೆದಿದ್ದೇ ಆಗಿದ್ದರೆ ಮುಂದಾಗಬಹುದಾಗಿದ್ದ ಘಟನೆಯನ್ನು ಊಹಿಸಲೂ ಸಾಧ್ಯವಿರಲಿಲ್ಲ ಎಂದು ವಿಶ್ಲೇಷಿಸಿದ್ದಾರೆ.
ಅಧಿಕಾರಿಗಳು ವಿವರ ನೀಡಿರಲಿಲ್ಲ
ಈ ಹಿಂದೆಯೂ ಬೆಳಗಾವಿಯ ಸುವರ್ಣಸೌಧದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಬಂಧನ, ನಂತರ ಅವರನ್ನು ರಾತ್ರಿ ಇಡೀ ಪೋಲಿಸರು ಸುತ್ತಾಡಿಸಿದ ವಿವರಗಳನ್ನು ಹಿರಿಯ ಅಧಿಕಾರಿಗಳು ನನಗೆ ತಿಳಿಸಿರಲಿಲ್ಲ.
ಇದರಲ್ಲೂ ನಮ್ಮ ಸಹೋದ್ಯೋಗಿಗಳು ವಿಷಯ ಮರೆಮಾಚಿ ಪ್ರಕರಣ ನಡೆದ ಬಗ್ಗೆ ನನ್ನ ರಾಜೀನಾಮೆಯನ್ನೇ ಕೇಳಿದ್ದರು.
ತಮ್ಮ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಮುನ್ನೆಲೆಗೆ ಬಂದಾಗಲೆಲ್ಲಾ ಯಾವುದೋ ಪ್ರಕರಣ ಮುಂದೆ ಮಾಡಿ, ಅದಕ್ಕೆ ನನ್ನ ಹೆಸರು ಥಳಕು ಹಾಕಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ಇ.ಡಿ. ದಾಳಿ ಹಿಂದೆ ನಮ್ಮವರು
ನನ್ನ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಯಿತು, ಇದರ ಹಿಂದೆ ನಮ್ಮವರೇ ಇದ್ದಾರೆಂಬುದಾಗಿ ವಿರೋಧ ಪಕ್ಷಗಳ ಮುಖಂಡರು ಹೇಳುತ್ತಾರೆ.
ನನ್ನ ಇತಿಮಿತಿಯಲ್ಲಿ ಅಧಿಕಾರ ಮಾಡಿದ್ದೇನೆ, ಆದರೆ, ಯಾರದ್ದೋ ತಪ್ಪಿಗೆ ಕೆಲವು ಕಹಿ ಘಟನೆಗಳು ನಡೆದಿವೆ, ಅದರಲ್ಲಿ ಕಾಲ್ತುಳಿತ ಪ್ರಕರಣದಿಂದ 11 ಮಂದಿ ಮೃತಪಟ್ಟಿದ್ದಾರೆ, ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇದಕ್ಕೂ ನನಗೂ ಸಂಬಧವೇ ಇಲ್ಲ, ಆದರೂ, ಗೃಹ ಸಚಿವನಾಗಿ ನಾನು ನೈತಿಕ ಹೊಣೆ ಹೊರಬೇಕಿದೆ, ಹೇಗಿದ್ದರೂ ಸರ್ಕಾರ ಪ್ರತ್ಯೇಕ ತನಿಖೆಗಳಿಗೆ ಆದೇಶ ಮಾಡಿದೆ, ತನಿಖೆಯಿಂದ ಸತ್ಯ ಹೊರಬರಲಿದೆ.
ವರದಿಯಿಂದ ಸತ್ಯ ತಿಳಿಯುತ್ತದೆ
ವರದಿ ನಂತರ ನನ್ನನ್ನು ವಿರೋಧಿಸುವವರಿಗೆ ಸತ್ಯ ಏನೆಂಬುದು ತಿಳಿಯುತ್ತದೆ, ನನಗೆ ಅಧಿಕಾರದಲ್ಲಿ ಇರಲು ಆಸಕ್ತಿ ಇಲ್ಲವಾಗಿದೆ ಎಂದು ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಒಳ ಮೀಸಲಾತಿ ಸಮೀಕ್ಷೆ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆಯೂ ಆಪ್ತರನ್ನು ಕೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಇದೇ ವಿಚಾರದಲ್ಲಿ ಮುಳುಗಿರುವ ಡಾ.ಪರಮೇಶ್ವರ್ ಏನು ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

