ಮೈಸೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗೆ ಸೊನ್ನೆ ಅಂಕ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಚಾರದಿಂದ ಬದುಕಿರುವುದು, ಅವರ ನೇತೃತ್ವದ ಸರ್ಕಾರದ ನೋಟು ಅಮಾನ್ಯೀಕರಣದಿಂದ ಯಾರಿಗೆ ಅನುಕೂಲವಾಗಿದೆ, ಅಚ್ಚೆ ದಿನ್ ಆಯೇಗಾ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ, ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದರು, ರೈತರು ಒಂದು ವರ್ಷ ಚಳವಳಿ ಏಕೆ ಮಾಡಿದರು ಎಂದರು.
11 ವರ್ಷ ತುಂಬಿಸಿದರು
ದೇಶದ ಪ್ರಧಾನಮಂತ್ರಿಯಾಗಿ ಮೋದಿ ಅವರು ಹನ್ನೊಂದು ವರ್ಷ ತುಂಬಿಸಿದ್ದಾರೆ ಅಷ್ಟೇ, ಪ್ರಮುಖವಾಗಿ ಏನು ಹೇಳಿದ್ದರೋ ಅದನ್ನು ಮಾಡಿಲ್ಲ.
ಸುದ್ದಿಮಾಧ್ಯಮಗಳು ಮೋದಿ ಅವರಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ, ಅವುಗಳ ಮೂಲಕ ಸುಳ್ಳು ವಿಚಾರಗಳಿಗೆ ಪ್ರಚಾರ ನೀಡುತ್ತಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಇದರ ಅನುಷ್ಠಾನ ಸಾಧ್ಯವಿಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದವರು ನಮ್ಮ ಗ್ಯಾರಂಟಿಗಳನ್ನೇ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಕಲು ಮಾಡಿದರು.
ನಮ್ಮ ಗ್ಯಾರಂಟಿ ಜಾರಿ
ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಜಾರಿ ಮಾಡಿದರು.
ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ, ಕೇಂದ್ರದಿಂದ ರಾಜ್ಯಗಳಿಗೆ ಶೇ.50ರಷ್ಟು ತೆರಿಗೆ ಹಂಚಿಕೆ ಮಾಡಬೇಕು ಎಂದು ಪ್ರತಿಪಾದಿಸಿದ್ದರು, ಪ್ರಧಾನಿಯಾದ ನಂತರ ಏನು ಮಾಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5,300 ಕೋಟಿ ರೂ. ಘೋಷಿಸಿಯೂ ಕೊಡಲಿಲ್ಲ, 15ನೇ ಹಣಕಾಸು ಆಯೋಗ ರಾಜ್ಯಕ್ಕೆ 11,495 ಕೋಟಿ ರೂ. ಶಿಫಾರಸು ಮಾಡಿದರೂ ಕೊಡಲಿಲ್ಲ, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಬಿಟ್ಟು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದರು.

