ಬೆಂಗಳೂರು:ಸಿದ್ದರಾಮಯ್ಯ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧದ ಮೆಟ್ಟಿಲುಗಳಿಗಷ್ಟೇ ಮುಖ್ಯಮಂತ್ರಿಯೋ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ವೇಳೆ ಕೆಎಸ್‌ಸಿಎ ಕ್ರೀಡಾಂಗಣ ಬಳಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಗ್ದಾಳಿ ಇನ್ನೂ ಮುಂದುವರೆದಿದೆ.
ಸರ್ಕಾರದ ಸಮಾರಂಭ
ಕಾಲ್ತುಳಿತದಿಂದ 11 ಮಂದಿ ಕ್ರೀಡಾಭಿಮಾನಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಏರ್ಪಡಿಸಿದ್ದ ಸಮಾರಂಭವನ್ನು ಕುಮಾರಸ್ವಾಮಿ ಟೀಕಿಸಿದ್ದರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಕ್ರೀಡಾಭಿಮಾನಿಗಳು ಮೃತಪಟ್ಟಿದ್ದು ಸರ್ಕಾರ ಏರ್ಪಡಿಸಿದ್ದ ವಿಧಾನಸೌಧದ ಮೆಟ್ಟಿಲುಗಳ ಮೇಲಿನ ಸಮಾರಂಭದಲ್ಲಿ ಅಲ್ಲ, ಕೆಎಸ್‌ಸಿಎ ಕ್ರೀಡಾಂಗಣದ ಬಳಿ ಸಂಭವಿಸಿದ ದುರಂತದಲ್ಲಿ.
ವಿಧಾನಸೌಧ ಮೆಟ್ಟಿಲುಗಳ ಮೇಲೆ ಸರ್ಕಾರ ವಿಜಯೋತ್ಸವ ಆಚರಿಸಿತು, ಅಲ್ಲಿ ಯಾರೂ ಸಾಯಲಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಷ್ಟೇ ಕಾಲ್ತುಳಿತ ಸಂಭವಿಸಿ ಜನ ಸತ್ತಿದ್ದಾರೆ ಎಂದಿದ್ದರು.
ಕುಮಾರಸ್ವಾಮಿ ತಿರುಗೇಟು
ಇದಕ್ಕೆ ಟ್ವೀಟ್ ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ನೀವು ವಿಧಾನಸೌಧದ ಮೆಟ್ಟಿಲುಗಳಿಗೆ ಮಾತ್ರ ಮುಖ್ಯಮಂತ್ರಿಯೇ, ದಯವಿಟ್ಟು ಹೇಳುವಿರಾ.
ಕಾಲ್ತುಳಿತ ದುರಂತದ ಹೊಣೆಯನ್ನು ಪೊಲೀಸರ ಮೇಲಷ್ಟೇ ಎತ್ತಿಹಾಕಿ ’ಕೈ’ ತೊಳೆದುಕೊಳ್ಳುವುದು ಎಷ್ಟು ಸರಿ, ಪ್ರತಿಪಕ್ಷಗಳನ್ನು ದೂರಿ ಪಾರಾಗುವ ಹುನ್ನಾರವೇಕೆ, ಮೆಟ್ಟಿಲುಗಳ ಮುಖ್ಯಮಂತ್ರಿಗಳೇ ಎಂದು ಮಾತುಗಳಿಂದ ಕುಟುಕಿದ್ದಾರೆ.

