ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಜಾತಿ ಜನಗಣತಿ ನಡೆಸುವ ಬದ್ಧತೆ ಮತ್ತು ಪ್ರಾಮಾಣಿಕತೆ ನಿಜಕ್ಕೂ ಇದ್ದರೆ, ಸಮೀಕ್ಷೆ ಹೇಗಿರಬೇಕು ಎಂಬ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸಿ, ಸರ್ವಪಕ್ಷಗಳ ಸಭೆ ಕರೆದು ಎಲ್ಲರ ಅಭಿಪ್ರಾಯ ಆಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
90 ದಿನಗಳ ಕಾಲಮಿತಿಯಲ್ಲಿ ಜಾತಿ ಜನಗಣತಿ ಸಮೀಕ್ಷೆ ನಡೆಸುವ ಕುರಿತು ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ, ಪ್ರಸ್ತುತ ಸನ್ನಿವೇಶದಲ್ಲಿ ಸಮೀಕ್ಷೆ ಹೇಗೆ ಸಾಧ್ಯ, ಶಾಲೆಗಳು ಈಗಾಗಲೇ ಆರಂಭವಾಗಿವೆ, ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿದರೆ, ಶೈಕ್ಷಣಿಕ ಚಟುವಟಿಕೆಗಳು ಬುಡಮೇಲಾಗುತ್ತವೆ.
ಸಮೀಕ್ಷೆಗೆ ಯಾರ ನಿಯೋಜನೆ
ಇದು ಮಕ್ಕಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ, ಪರಿಸ್ಥಿತಿ ಹೀಗಿರುವಾಗ 90 ದಿನಗಳಲ್ಲಿ ಸಮೀಕ್ಷೆ ನಡೆಸಲು ಸರ್ಕಾರ ಯಾರನ್ನು ನಿಯೋಜಿಸಲಿದೆ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಅವಿವೇಕದ ಕ್ರಮ, ಅನೇಕ ಅಕ್ಷರಸ್ಥರೇ ಇಂದಿಗೂ ಆನ್‌ಲೈನ್ ವ್ಯವಸ್ಥೆಯಿಂದ ದೂರ ಇರುವಾಗ ಮಾಹಿತಿಯ ನಿಖರತೆ ಮತ್ತು ಗುರುತು ಪತ್ತೆ ಹೇಗೆ ಸಾಧ್ಯವಾಗಲಿದೆ, ತಪ್ಪು ದಾಖಲಾತಿ ತಡೆಯಲು ಸರ್ಕಾರದ ಕ್ರಮ ಏನು.
ಆದ್ದರಿಂದ ಸಮಗ್ರ ಸಿದ್ಧತೆ ಮುಗಿಸಿ, ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿದ ನಂತರವಷ್ಟೇ ಶಿಕ್ಷಕರನ್ನು ಬಳಸಿ ಜಾತಿ ಜನಗಣತಿ ಸಮೀಕ್ಷೆ ನಡೆಸಿ, ರಾಜ್ಯದ ಹಿತದೃಷ್ಟಿಯಿಂದಲೂ ಇದು ಅತಿ ಅವಶ್ಯಕ ಎಂದಿದ್ದಾರೆ.
’ಚೌಚೌ ವರದಿ’ಗೆ ಎಳ್ಳು-ನೀರು
10 ವರ್ಷಗಳ ಹಿಂದೆ ಕಾಂತರಾಜು ನಡೆಸಿದ ಜಾತಿ ಜನಗಣತಿ ವರದಿ ಹಾಗೂ ನಂತರ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿದ ’ಚೌಚೌ ವರದಿ’ಗೆ ಎಳ್ಳು-ನೀರು ಬಿಟ್ಟಂತಾಗಿದೆ, ಈ ಕಾರ್ಯಕ್ಕೆ ತೆರಿಗೆದಾರರ 167 ಕೋಟಿ ರೂ. ವೆಚ್ಚವಾಗಿದ್ದು, ವರದಿ ಕೈಬಿಟ್ಟಿರುವುದರಿಂದ ಸಮೀಕ್ಷೆಗೆ ವೆಚ್ಚವಾದ ಹಣವನ್ನು ಯಾರಿಂದ ವಸೂಲಿ ಮಾಡುತ್ತೀರಿ, ಈಗಾಗಲೇ ವ್ಯರ್ಥವಾದ ಬೃಹತ್ ಮೊತ್ತಕ್ಕೆ ಯಾರು ಹೊಣೆ.
ಕುರ್ಚಿಗೆ ಕಂಟಕ ಬಂದಾಗಲೆಲ್ಲ ಜಾತಿ ಜನಗಣತಿ ವರದಿ ಕಾರ್ಡ್ ಬಳಸಿ, ಮಂಕು ಬೂದಿ ಎರಚಿ ಜನರ ಗಮನ ಬೇರೆಡೆ ಸೆಳೆಯುವ ಮೂಲಕ ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡುವ ಕುತಂತ್ರ ಈಗ ಗುಟ್ಟಾಗಿ ಉಳಿದಿಲ್ಲ, ಸಾಕು ನಿಲ್ಲಿಸಿ ನಿಮ್ಮ ನಾಟಕ.
ರಾಷ್ಟ್ರೀಯ ದಶವಾರ್ಷಿಕ ಜನಗಣತಿಯಲ್ಲಿ ಜಾತಿಗಣತಿ ವಿಷಯವನ್ನೂ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಈಗಾಗಲೇ ನಿರ್ಧಾರ ಮಾಡಿದ್ದು, ಕರ್ನಾಟಕದಲ್ಲಿ ಮತ್ತೊಮ್ಮೆ ಜಾತಿಗಣತಿ ಹೆಸರಿನಲ್ಲಿ ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ವಿನಾಕಾರಣ ದುಂದು ವೆಚ್ಚ ಮಾಡಬೇಡಿ.
ಸಂಪುಟದ ಮುಂದೆ ತರುವ ಹಠ
ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂಬುದಾಗಿ ಸಾರ್ವಜನಿಕರು, ಮಠಾಧೀಶರು, ಹಲವು ಸಮುದಾಯಗಳ ಮುಖಂಡರು, ಅಲ್ಲದೆ, ಆಡಳಿತಾರೂಢ ಕಾಂಗ್ರೆಸ್‌ನ ಅನೇಕ ಸಚಿವರು, ಶಾಸಕರು ವಿರೋಧ ಮಾಡಿದರೂ, ತಮ್ಮ ನಿಲುವನ್ನೇ ಬಲವಾಗಿ ಸಮರ್ಥಿಸಿಕೊಂಡು, ಹಠದಿಂದ ಸಚಿವ ಸಂಪುಟದ ಮುಂದೆ ತಂದಿರಿ.
ಈಗ ಕಾಂಗ್ರೆಸ್ ಹೈಕಮಾಂಡ್ ತಪರಾಕಿ ಹಾಕಿದ್ದಕ್ಕೆ ಮರು ಸಮೀಕ್ಷೆ ತೀರ್ಮಾನಕ್ಕೆ ಒಪ್ಪಿಗೆ ನೀಡಿದ್ದು ಜಗಜ್ಜಾಹೀರಾಗಿದೆ.
ಜನರ ಮೇಲೆ ವಿಶ್ವಾಸವಿಲ್ಲ
ಇದು ರಾಜ್ಯದ ಜನರ, ಮಠಾಧೀಶರ, ಸಮುದಾಯಗಳ ಮುಖಂಡರ ಮೇಲೆ ವಿಶ್ವಾಸವಿಲ್ಲ, ಹೈಕಮಾಂಡ್ ಹೇಳಿದರೆ ಮಾತ್ರ ಕೇಳುತ್ತೇವೆ ಎಂಬುದನ್ನು ತೋರಿಸುತ್ತದೆ.
ಇದೆಲ್ಲಕ್ಕಿಂತ ಐಪಿಎಲ್ ವಿಜಯೋತ್ಸವದ ದುರಂತ ಮರೆ ಮಾಚಲು, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮಾಡುತ್ತಿರುವ ಮತ್ತೊಂದು ಬೃಹತ್ ನಾಟಕ ಎಂಬ ಅನುಮಾನಗಳು ದಟ್ಟವಾಗಿವೆ ಎಂದು ಟೀಕಿಸಿದ್ದಾರೆ.

