ಬೆಂಗಳೂರು:ದೇಶದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್, ಡೀಸೆಲ್, ಔಷಧ, ರಸಗೊಬ್ಬರ, ಎಣ್ಣೆ, ಅಡುಗೆ ಅನಿಲ ಬೆಲೆ ಎಷ್ಟಿತ್ತು, ಈಗ ಎಷ್ಟು ಏರಿಕೆಯಾಗಿದೆ ಎಂಬುದನ್ನು ಗಮನಿಸಬೇಕು ಎಂದರು.
ಬಿಜೆಪಿ ಪರಿವಾರದಿಂದ ಸುಳ್ಳು
ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಸುಳ್ಳುಗಳಿಗೆ ಜನರೇ ಉತ್ತರ ನೀಡುತ್ತಿದ್ದಾರೆ, ಅಭಿವೃದ್ಧಿ ಕಾರ್ಯಗಳಿಗೆ ಕೊಟ್ಟಿರುವ ಹಣ ಜನರ ಮನೆ ಬಾಗಿಲಿಗೆ ತಲುಪಿದೆ.
ಸುಳ್ಳು ಬಿಜೆಪಿ ಮನೆ ದೇವರು, ಅಧಿಕಾರ ಇದ್ದಾಗಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ, 371ಜೆ ತಿದ್ದುಪಡಿ ವಿರೋಧಿಸಿದ್ದರು, ಉಪಪ್ರಧಾನಿಯಾಗಿದ್ದ ಎಲ್.ಕೆ.ಅಡ್ವಾಣಿ 371ಜೆ ಜಾರಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದರು.
ಡಾ.ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಹೋರಾಟದ ಫಲವಾಗಿ 371ಜೆ ಜಾರಿಗೆ ತರಲಾಯಿತು.
200 ಭರವಸೆಗಳ ಈಡೇರಿಕೆ
ಕ್ರಾಂತಿಕಾರಿ ಬಸವಣ್ಣನವರ ಆಶಯದಂತೆ ನುಡಿದಂತೆ ನಡೆಯುವರು ನಾವು, ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಐದು ಗ್ಯಾರಂಟಿಗಲೂ ಸೇರಿದಂತೆ 200 ಭರವಸೆಗಳನ್ನು ಈಡೇರಿಸಲಾಗಿದೆ, ಮುಂದಿನ 3 ವರ್ಷಗಳ ಆಡಳಿತದಲ್ಲಿ ಉಳಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧಿಸಿ ತೋರಿಸುತ್ತೇವೆ ಎಂದರು.
ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ರಾಜ್ಯ 2ನೇ ಸ್ಥಾನದಲ್ಲಿದೆ, ರಾಜ್ಯ ಆರ್ಥಿಕ ಪ್ರಗತಿ ಪಥದಲ್ಲಿ ಇದೆ ಎಂಬುದಕ್ಕೆ ಇದೇ ಸಾಕ್ಷಿ.
13,000 ಕೋಟಿ ರೂ. ಅನುದಾನ
ಕೆಕೆಆರ್‌ಡಿಬಿಗೆ ವರ್ಷಕ್ಕೆ 5,000 ಕೋಟಿ ರೂ. ಕೊಡುವುದಾಗಿ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ 3 ವರ್ಷಗಳಲ್ಲಿ 13,000 ಕೋಟಿ ರೂ. ಅನುದಾನ ನೀಡಲಾಗಿದೆ, ಡಾ.ನಂಜುಂಡಪ್ಪ ವರದಿ ಶಿಫಾರಸಿನ ಆಶಯಗಳನ್ನು ಸರ್ಕಾರ ಈಡೇರಿಸುತ್ತಿದೆ.
ಆರೋಗ್ಯ, ಶಿಕ್ಷಣ, ಉದ್ಯೋಗದ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲಾಗುತ್ತಿದೆ, 42 ಆಸ್ಪತ್ರೆ ಮೇಲ್ದರ್ಜೆ, ಹೊಸ ಆಸ್ಪತ್ರೆಗಳ ನಿರ್ಮಾಣ, ಆರೋಗ್ಯ ಸೌಲಭ್ಯ ವಿಸ್ತರಣೆಗೆ 847 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂದರು.

