ಬೆಂಗಳೂರು:ಸರ್ಕಾರಿ ವಸತಿ ಯೋಜನೆಗಳಲ್ಲಿ ಮುಸ್ಲೀಂ ಸಮುದಾಯಕ್ಕೆ ಶೇಕಡ 15ರಷ್ಟು ಮೀಸಲಾತಿ ನೀಡಿರುವುದನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹೇಗಾದರೂ ಸರಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆದು ಬಿಜೆಪಿ-ಜೆಡಿಎಸ್ ಮೈತ್ರಿ ಆಡಳಿತ ತರಬೇಕಿದೆ ಎಂದಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಪಂಚತಾರಾ ಹೋಟೆಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಬ್ಯಾಂಕ್‌ಗಾಗಿ ಮುಸ್ಲೀಂ ಸಮುದಾಯಕ್ಕೆ ಮಿತಿ ಮೀರಿ ನೆರವು ನೀಡುತ್ತಿದೆ ಎಂದು ಕಿಡಿಕಾರಿದರು.
ಬರೀ ಮುಸ್ಲೀಮರ ಓಲೈಕೆ
ಪರಿಶಿಷ್ಟ ಜಾತಿ-ವರ್ಗದವರಿಗೆ ಯೋಜನೆಗಳನ್ನು ನೀಡುವ ಬದಲು ಬರೀ ಮುಸ್ಲೀಮರ ಓಲೈಕೆ ಮಾಡುವುದೇ ಈ ಸರ್ಕಾರದ ಧ್ಯೇಯೋದ್ದೇಶವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಅಭಿವೃದ್ಧಿ ಸ್ಥಗಿತಗೊಂಡು ಜನರ ಸಂಕಷ್ಟ ಕೇಳುವವರು ಇಲ್ಲವಾಗಿದೆ.
ಆಡಳಿತ ನಡೆಸುವ ಬದಲು ಬರೀ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ, ನೀರಾವರಿ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿವೆ, ಇಡೀ ರಾಜ್ಯದಲ್ಲಿ ಒಂದು ಕಿಲೋ ಮೀಟರ್ ರಸ್ತೆ ಮಾಡಿಲ್ಲ, ಇಂತಹ ಸರ್ಕಾರ ನಮಗೆ ಬೇಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ
ಇಂತಹ ಭ್ರಷ್ಟ ಸರ್ಕಾರವನ್ನು ಹೇಗಾದರೂ ಮಾಡಿ ಕಿತ್ತಾಕಿ, ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬರಬೇಕು ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಗೊಂದಲ ಇಲ್ಲ, ಜೆಡಿಎಸ್ ಪಕ್ಷ ಸಂಘಟನೆಗಾಗಿ ಪ್ರವಾಸ ಕೈಗೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ.
ಜೆಡಿಎಸ್ ಮೈತ್ರಿ ಸಂಶಯ ಬೇಡ
ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಯಲಿದೆ, ಇದರಲ್ಲಿ ಯಾರಿಗೂ ಸಂಶಯ ಬೇಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಂಬಿಕೆ ಮತ್ತು ವಿಶ್ವಾಸವಿದೆ, ಅದನ್ನು ಇಬ್ಬರೂ ಹಲವು ಬಾರಿ ಬಹಿರಂಗವಾಗಿ ತೋರ್ಪಡಿಸಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಅಪನಂಬಿಕೆಗಳು ಏಕೆ, ನಮ್ಮ ಮುಂದಿರುವುದು ಈ ಸರ್ಕಾರವನ್ನು ತೆಗೆದು ಮತ್ತೆ ನಮ್ಮ ಆಡಳಿತ ತರುವುದು ಎಂದರು.

