ಬೆಂಗಳೂರು:ರಾಜ್ಯ ಬಿಜೆಪಿ ನಾಯಕರು ತಮ್ಮ ನಡುವಿನ ವ್ಯತ್ಯಾಸಗಳನ್ನು ಮರೆತು ಒಟ್ಟಾಗಿ, ಒಂದಾಗಿ ಹೋದಾಗ ಮಾತ್ರ ಕಾರ್ಯಕರ್ತರಿಗೆ ಗೌರವ ಕೊಟ್ಟಂತಾಗುತ್ತದೆ, ಅಲ್ಲದೆ, ಜನರು ಪಕ್ಷದ ಮೇಲೆ ವಿಶ್ವಾಸ ಇಡುತ್ತಾರೆ ಎಂಬ ಕಿವಿಮಾತನ್ನು ಕೇಂದ್ರ ಸಚಿವ ಹಾಗೂ ಹಿರಿಯ ನಾಯಕ ಅಮಿತ್ ಷಾ ಹೇಳಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕುರಿತು ದೆಹಲಿ ವರಿಷ್ಠರು ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದರು.
ಮುಖಂಡರ ಅಭಿಮತ
ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲ ಜಿಲ್ಲಾಧ್ಯಕ್ಷರ ಅಭಿಪ್ರಾಯ, ಪಕ್ಷದ ಮುಖಂಡರ ಅಭಿಮತ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಕಳೆದ ಒಂದೂಕಾಲು ವರ್ಷದಿಂದ ಕೊಟ್ಟಿರುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತನಾಗಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೇನೆ, ಕೇಂದ್ರ ಮತ್ತು ರಾಷ್ಟ್ರೀಯ ನಾಯಕರಿಗೆ ಕೊಡಬೇಕಾದ ಮಾಹಿತಿಯನ್ನು ಕಾಲಕಾಲಕ್ಕೆ ಕೊಡುತ್ತಾ ಬಂದಿದ್ದೇನೆ.
ರಾಜಕೀಯ ವಿದ್ಯಮಾನ ಚರ್ಚೆ
ನಾನು ಮತ್ತು ಕೆಲವು ಹಿರಿಯ ಮುಖಂಡರು ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ಮಾರ್ಗದರ್ಶಕ ಅಮಿತ್ ಷಾ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಸುಮಾರು 25 ನಿಮಿಷ ಸುದೀರ್ಘ ಚರ್ಚಿಸಿದ್ದೇವೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಡೆದು ಆಳುವ ನೀತಿ ಅನುಸರಿಸುತ್ತಿದೆ, ಬಡವರು, ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂಬ ನಮ್ಮ ಮಾತುಗಳನ್ನು ಅಮಿತ್ ಷಾ ಸಮಾಧಾನದಿಂದ ಆಲಿಸಿದರು.
ಕೇಂದ್ರ ನಾಯಕರಿಗೆ ವಿವರಣೆ
ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅದಕ್ಕಿಂತ ಹೆಚ್ಚಿನ ಹೊಣೆಗಾರಿಕೆ ವಿರೋಧ ಪಕ್ಷದ ಮೇಲೂ ಇದೆ, ಸರ್ಕಾರದ ಕಾರ್ಯವೈಖರಿ, ಕಾಂಗ್ರೆಸ್‌ನ ಕರಾಳ ಮುಖವನ್ನು ಜನರ ಮುಂದೆ ಅನಾವರಣಗೊಳಿಸುವ ಕೆಲಸವನ್ನು ನಾವು ಮಾಡುತ್ತಾ ಬಂದಿದ್ದೇವೆ, ಇದೆಲ್ಲವನ್ನು ಕೇಂದ್ರ ನಾಯಕರಿಗೆ ವಿವರಿಸಿದ್ದು, ಅಮಿತ್ ಷಾ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು.
ಬಿಜೆಪಿ ಉಚ್ಛಾಟಿತ ಕೆ.ಎಸ್.ಈಶ್ವರಪ್ಪ ಮರುಸೇರ್ಪಡೆ ಕುರಿತು ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದರು.

