ಬೆಂಗಳೂರು:ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ತಂಡ ದೆಹಲಿಯಿಂದ ಖಾಲಿ ಕೈಯಲ್ಲಿ ನಗರಕ್ಕೆ ಹಿಂತಿರುಗಿದೆ.
ಪ್ರಪಂಚದ ವಿದ್ಯಮಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ತೊಡಗಿ ಕೊಂಡಿರುವುದರಿಂದ ಅವರ ಭೇಟಿಗೂ ಸಿದ್ದರಾಮಯ್ಯ ಅವರಿಗೆ ಸಮಯ ಸಿಗಲಿಲ್ಲ.
ಪ್ರಧಾನಿ ಭೇಟಿಗೆ ಕೋರಿಕೆ
ದೆಹಲಿಗೆ ತೆರಳುವುದಕ್ಕೂ ಮುನ್ನ ಪ್ರಧಾನಿ ಅವರ ಭೇಟಿಗೆ ಅವಕಾಶ ಕೋರಿದ್ದರು, ಸಾಧ್ಯವಾದರೆ, ಇಂದು ಭೇಟಿಗೆ ಅವಕಾಶ ನೀಡುವುದಾಗಿ ಪ್ರಧಾನಿ ಕಾರ್ಯಾಲಯ ತಿಳಿಸಿತ್ತು.
ಪ್ರಧಾನಿ ಅವರು ವಿಶ್ವದ ವಿದ್ಯಮಾನಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದರಿಂದ ಜುಲೈ ಮೊದಲ ವಾರದಲ್ಲಿ ಭೇಟಿಗೆ ಅವಕಾಶ ನೀಡುವ ಸಾಧ್ಯತೆ ಬಗ್ಗೆ ಕಾರ್ಯಾಲಯ ತಿಳಿಸಿದೆ.
ನರೇಂದ್ರ ಮೋದಿ ಭೇಟಿಗೂ ಮಿಗಿಲಾಗಿ ಕಾಂಗ್ರೆಸ್ ಮತ್ತು ಸರ್ಕಾರಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರ ಜೊತೆ ಕೆಲವು ರಾಜಕೀಯ ತೀರ್ಮಾನ ಕೈಗೊಳ್ಳುವ ಉದ್ದೇಶವೇ ಮುಖ್ಯಮಂತ್ರಿ ದೆಹಲಿ ಪ್ರವಾಸದ ಗುರಿಯಾಗಿತ್ತು.
ತುರ್ತಾಗಿ ಸಂಪುಟ ಪುನರ್ ರಚನೆ
ತುರ್ತಾಗಿ ಸಂಪುಟಕ್ಕೆ ಒಂದಿಬ್ಬರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವುದು, ಇದಕ್ಕಾಗಿ ಒಬ್ಬರನ್ನು ಕೈಬಿಡುವುದು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಾದಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೆಳಗಿಳಿಸಿ, ಆ ಸ್ಥಾನಕ್ಕೆ ತಮ್ಮ ಆಪ್ತ ಬಣದ ಸಚಿವರಾದ ಈಶ್ವರ್ ಖಂಡ್ರೆ ಇಲ್ಲವೇ ಸತೀಶ್ ಜಾರಕಿಹೊಳಿ ಅವರನ್ನು ತರುವುದು ಇದರಲ್ಲಿ ಸೇರಿತ್ತು.
ವಿಧಾನ ಪರಿಷತ್ನ ತೆರವಾದ ನಾಲ್ಕು ಸ್ಥಾನಗಳಿಗೆ ನೇಮಕ ಮಾಡಲು ಈ ಹಿಂದೆ ನೀಡಲಾದ ಹೆಸರುಗಳ ಪಟ್ಟಿಗೇ ವರಿಷ್ಠರ ಅನುಮೋದನೆ ಪಡೆಯುವ ಹಾಗೂ ಕೆಲವು ಸೂಕ್ಷ್ಮ ವಿಚಾರಗಳನ್ನು ಅವರ ಗಮನಕ್ಕೆ ತರುವ ಉದ್ದೇಶವೂ ಇತ್ತು.
ರಾಹುಲ್ ವಿದೇಶ ಪ್ರವಾಸ
ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಸ್ವದೇಶಕ್ಕೆ ಮರಳಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದರು.
ನಿಗದಿತ ಸಮಯಕ್ಕೆ ರಾಹುಲ್ ದೆಹಲಿಗೆ ಹಿಂದಿರುಗದ ಹಿನ್ನೆಲೆಯಲ್ಲಿ ಎಐಇಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಸಿದ್ದರಾಮಯ್ಯ ಪ್ರತ್ಯೇಕವಾಗಿ ಭೇಟಿ ಮಾಡಿದರು.
ಮೂವರ ಭೇಟಿ ಸಂದರ್ಭದಲ್ಲೂ ತಮ್ಮ ವಿಚಾರಗಳನ್ನು ಮುಂದಿಟ್ಟರು, ಎಲ್ಲವನ್ನೂ ಆಲಿಸಿದ ಅವರುಗಳು, ರಾಹುಲ್ ಬಂದ ನಂತರ ಅವರೊಂದಿಗೆ ಚರ್ಚಿಸಿ ಮಾಹಿತಿ ನೀಡುವುದಾಗಿ ಸಿದ್ದರಾಮಯ್ಯ ಅವರಿಗೆ ಹೇಳಿ ಕಳುಹಿಸಿದ್ದಾರೆ.
ಖರ್ಗೆ ಅಸಮಾಧಾನ
ಇದಲ್ಲದೆ ಖರ್ಗೆ ಅವರು, ರಾಜ್ಯದಲ್ಲಿ ಪಕ್ಷದ ಶಾಸಕರೇ ಆಡಳಿತಶಾಹಿ ವಿರುದ್ಧ ತಿರುಗಿಬಿದ್ದಿರುವುದು ಹಾಗೂ ಕೆಲವು ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಐಸಿಸಿಯ ಖಡಕ್ ಸಂದೇಶದ ನಂತರವೂ ಪಕ್ಷದ ರಾಜ್ಯ ನಾಯಕತ್ವ ಸೇರಿದಂತೆ ಕೆಲವು ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುತ್ತಿರುವುದು ಸರಿಯಲ್ಲ, ನೀವು ಈ ಕಡೆ ಸ್ವಲ್ಪ ಗಮನಹರಿಸಿ ಎಂದಿದ್ದಾರೆ.
ಲಂಚ ಆರೋಪ ಹಾಗೂ ಅಧಿಕಾರಿಗಳ ನಡೆ ಬಗ್ಗೆ ಶಾಸಕರು ಎತ್ತಿರುವ ಎಲ್ಲಾ ಅಂಶಗಳನ್ನು ಗಂಬೀರವಾಗಿ ತೆಗೆದುಕೊಂಡಿದ್ದು, ಅವುಗಳನ್ನು ಯಾವ ರೀತಿ ನಿಭಾಯಿಸಲಾಗುತ್ತಿದೆ ಎಂಬ ವಿವರವನ್ನೂ ಖರ್ಗೆ ಅವರಿಗೆ ಸಿದ್ದರಾಮಯ್ಯ ನೀಡಿದರೆನ್ನಲಾಗಿದೆ.

