ಬೆಂಗಳೂರು:ರಾಜ್ಯ ಬೊಕ್ಕಸ ಬರಿದಾಗಿರುವ ಸತ್ಯವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಆಡಳಿತ ಪಕ್ಷದ ಕೆಲವರು ಬಹಿರಂಗಪಡಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ ತಮ್ಮ ಆಡಳಿತ ವೈಫಲ್ಯ ಒಪ್ಪಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಒತ್ತಾಯಿಸಿದ್ದಾರೆ.
ಆಡಳಿತ ಪಕ್ಷದ ಕೆಲವು ಶಾಸಕರಲ್ಲದೆ, ಖುದ್ದು ಡಾ.ಪರಮೇಶ್ವರ್, ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಕನ್ನಡಿ ಹಿಡಿದಿದ್ದಾರೆ.
ಹಳ್ಳ ಹಿಡಿದ ಆರ್ಥಿಕ ಸ್ಥಿತಿ
ರಾಜ್ಯದಲ್ಲಿ ಅಭಿವೃದ್ಧಿಗೆ ಸಿದ್ದರಾಮಯ್ಯ ಬಳಿ ಹಣವಿಲ್ಲ ಎಂಬುದಾಗಿ ಡಾ.ಪರಮೇಶ್ವರ್ ನೀಡಿರುವ ಹೇಳಿಕೆ ಹಳ್ಳ ಹಿಡಿದಿರುವ ಆರ್ಥಿಕ ಸ್ಥಿತಿಯನ್ನು ಬಿಂಬಿಸುವುದಾಗಿದ್ದು, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ.
ತಾವು ಮಹಾನ್ ಆರ್ಥಿಕ ತಜ್ಞರಂತೆ ಬಿಂಬಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ, ಕರ್ನಾಟಕವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ, ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಲೇ ಆರ್ಥಿಕಸ್ಥಿತಿಯನ್ನು ಮಣ್ಣುಪಾಲು ಮಾಡಿದರು.
ಭ್ರಷ್ಟಾಚಾರ ವಿಷಯದಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ, ಅವೈಜ್ಞಾನಿಕ ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿಯಾಗಲಿದೆ ಎಂಬ ಸತ್ಯವನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಉಲ್ಲೇಖಿಸಿದ್ದರು.
ಆರ್ಥಿಕ ಅಧಃಪತನಕ್ಕೆ ಸಾಕ್ಷಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಣ ಸಂಗ್ರಹಿಸಿದ ನಂತರ ಗೃಹಲಕ್ಷ್ಮಿ ಖಾತೆಗೆ ಹಾಕುತ್ತೇವೆ ಎಂದಿದ್ದರು, ಇದೆಲ್ಲಾ ರಾಜ್ಯ ಸರ್ಕಾರ ಆರ್ಥಿಕ ಅಧಃಪತನಕ್ಕೆ ಹೋಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಸಹಾ ಅಭಿವೃದ್ಧಿಗೆ ಹಣವಿಲ್ಲ ಎಂದಿದ್ದರು, ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ವಸತಿ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಬಹಿರಂಗಗೊಳಿಸಿ ಸರ್ಕಾರದ ದುರಾಡಳಿತ ಬೆತ್ತಲೆ ಮಾಡಿದರು.
ಇಷ್ಟಾದರೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಬಗ್ಗೆ ಸಿದ್ದರಾಮಯ್ಯ ಮೃದುಧೋರಣೆ ತಳೆದಿದ್ದಾರೆ.
ಅಭಿವೃದ್ಧಿಗೆ ಅನುದಾನ ಇಲ್ಲ
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲವೆಂದು ಆಡಳಿತ ಪಕ್ಷದ ಶಾಸಕ ರಾಜುಕಾಗೆ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮಾತನ್ನೂ ಆಡಿದರು.
ಮತ್ತೊಬ್ಬ ಶಾಸಕ ಎನ್.ವೈ.ಗೋಪಾಲಕೃಷ್ಣ ತಮ್ಮ ಕ್ಷೇತ್ರದಲ್ಲಿ ಚರಂಡಿ ನಿರ್ಮಿಸಲೂ ಅನುದಾನ ಸಿಗುತ್ತಿಲ್ಲ ಎಂದಿದ್ದು, ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಇನ್ನು ಎಷ್ಟು ನಿದರ್ಶನಗಳನ್ನು ನೀಡಬೇಕು ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

