ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಾನೂ ಸೇರಿದಂತೆ ಮೌನವಾಗಿದ್ದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ, ಇದೇ ರೀತಿ ಗೊಂದಲ ಮುಂದುವರೆಸಿದರೆ ಇರುವ ಅಧಿಕಾರವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿವಿಮಾತು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾದಿಬೀದಿಯಲ್ಲಿ ಅನಗತ್ಯವಾಗಿ ಮಾತನಾಡಿ ಪಕ್ಷ ಮತ್ತು ಸರ್ಕಾರಕ್ಕೆ ಉಂಟಾಗುವ ಧಕ್ಕೆ ತಪ್ಪಿಸಿ ಎಂದಿದ್ದಾರೆ.
ಗೊಂದಲ ನಿವಾರಣೆಗೆ ಮನವಿ
ಪಕ್ಷ ಮತ್ತು ಸರ್ಕಾರದಲ್ಲಿನ ಗೊಂದಲ ನಿವಾರಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಬೇಕು ಹಾಗೂ ಎಲ್ಲಾ ನಾಯಕರಿಗೂ ಎಚ್ಚರಿಕೆ ನೀಡುವಂತೆ ಕೋರಿದ್ದಾರೆ.
ಸರ್ಕಾರದ ಮತ್ತು ಪಕ್ಷದ ಮಟ್ಟದಲ್ಲಿ ಯಾವುದೇ ರಾಜಕೀಯ ಗೊಂದಲಗಳಿಲ್ಲ, ನಾವೇ ಅದನ್ನು ಸೃಷ್ಟಿಸಿದರೆ ಸಾರ್ವಜನಿಕರ ಮುಂದೆ ಸಣ್ಣವರಾಗುತ್ತೇವೆ.
ಜನಪರ ಕೆಲಸ ಮಾಡಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 135 ಸ್ಥಾನಗಳನ್ನು ಮತದಾರರು ನೀಡುವ ಮೂಲಕ ಜನಪರ ಕೆಲಸ ಮಾಡಿ ಎಂದು ಆಶೀರ್ವದಿಸಿದ್ದಾರೆ.
ಮತದಾರ ಪ್ರಭುವಿಗೆ ನಮ್ಮ ಸರ್ಕಾರ ಮನ್ನಣೆ ನೀಡಿ, ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳೂ ಅನುಷ್ಟಾನಗೊಂಡಿವೆ, ಮತ್ತೊಂದೆಡೆ ಅಭಿವೃದ್ಧಿ ಕಾರ್ಯವೂ ನಡೆದಿದೆ, ಅಲ್ಲೋ, ಇಲ್ಲೋ ಸಣ್ಣ ವ್ಯಾತ್ಯಾಸವಾಗಿದೆ ಎಂದು ಸಾರ್ವಜನಿಕವಾಗಿ ಬಿಂಬಿಸಬೇಡಿ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಏನೇ ಸಮಸ್ಯೆ ಇದ್ದರೂ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಕುಳಿತು ಪರಿಹರಿಸಿಕೊಳ್ಳಬೇಕು.
ಹುಲ್ಲುಕಡ್ಡಿ ನಿರ್ಧಾರವೂ ಸಾಧ್ಯವಿಲ್ಲ
ನಾವು ಹೇಳಿದಂತೆ ಇಲ್ಲಿ ನಡೆಯುವುದಿಲ್ಲ, ನಮ್ಮ ವರಿಷ್ಠರು ಗಟ್ಟಿಯಾಗಿದ್ದಾರೆ, ಅವರ ಆದೇಶವಿಲ್ಲದೆ ಹುಲ್ಲುಕಡ್ಡಿಯಷ್ಟೂ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ.
ಇದನ್ನರಿತು ನಾನೂ ಸೇರಿದಂತೆ ಎಲ್ಲಾ ನಾಯಕರೂ ಸಾರ್ವಜನಿಕವಾಗಿ ಗೊಂದಲದ ಹೇಳಿಕೆ ನೀಡದೆ ಅಭಿವೃದ್ಧಿ ಕಡೆ ಗಮನ ಕೊಡೋಣ, ಇದರಿಂದ ನಾವು 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದಿದ್ದಾರೆ.

