ಬೆಂಗಳೂರು:ನಾಡಪ್ರಭು ಕೆಂಪೇಗೌಡ ದಕ್ಷ ಹಾಗೂ ದೂರದೃಷ್ಟಿಯ ಆಡಳಿತಗಾರ, ಆಧುನಿಕ ಬೆಂಗಳೂರು ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಗುರುತಿಸುವಂತಾಗಲು ಅಡಿಪಾಯ ಹಾಕಿದ್ದು ನಾಡಪ್ರಭು ಕೆಂಪೇಗೌಡರು ಎಂದರು.
ಸರ್ಕಾರದಿಂದ ಜಯಂತಿ ಆಚರಣೆ
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ಕೆಂಪೇಗೌಡರ ಜನ್ಮದಿನಾಂಕ ತಿಳಿದು, ಸರ್ಕಾರ ನಿರಂತರವಾಗಿ ಕೆಂಪೇಗೌಡ ಜಯಂತಿ ಆಚರಣೆ ಮಾಡುತ್ತಿದೆ ಎಂದರು.
ಬೆಂಗಳೂರಿನ ನಾಲ್ಕು ದಿಕ್ಕಗಳಲ್ಲಿ ಗೋಪುರಗಳನ್ನು ಕಟ್ಟಿಸಿ, ವೃತ್ತಿ ಆಧಾರಿತ ಪ್ರದೇಶಗಳನ್ನು ಗುರುತಿಸಿ ನಗರತ್ ಪೇಟೆ, ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳನ್ನು ನಿರ್ಮಿಸಿದರು, ಕೆಂಪೇಗೌಡರ ಆಡಳಿತ ನಮಗೆಲ್ಲ ಮಾದರಿಯಾಗಿದೆ, ಬೆಂಗಳೂರು ಅಭಿವೃದ್ಧಿ ಕನಸು ನನಸು ಮಾಡುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ನಾಡಪ್ರಭು ಕೆಂಪೇಗೌಡ ಪ್ರತಿಮೆ, ಬಿಬಿಎಂಪಿ ಕಚೇರಿ ಮುಂಭಾಗದ ಪ್ರತಿಮೆ ಹಾಗೂ ವಿಧಾನಸೌಧ ಆವರಣದಲ್ಲಿನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸ್ಥಳೀಯ ವಾತಾವರಣ ಮನಗಂಡು ಕೆಂಪೇಗೌಡರು ಬೆಂಗಳೂರು ಕಟ್ಟದಿದ್ದರೆ, ನಾವು-ನೀವು ಇಲ್ಲಿ ಇರುತ್ತಿರಲಿಲ್ಲ, ಈ ನಗರ ಕಟ್ಟಿದ ಪರಿಣಾಮ ರಾಜ್ಯ, ದೇಶ ಹಾಗೂ ವಿದೇಶಗಳ ಜನರು ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದರು.
ವಿಮಾನ ನಿಲ್ದಾಣ ನಿರ್ಮಾಣ
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಲದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆರಂಭಿಸಿದಾಗ, ನಗರಾಭಿವೃದ್ಧಿ ಸಚಿವನಾಗಿ ಹಾಕಿದ ಕೊನೆ ಸಹಿ ಈ ವಿಮಾನ ನಿಲ್ದಾಣ ಎಂದು ಮೆಲುಕು ಹಾಕಿದರು.
ಕೆಂಪೇಗೌಡ ಪ್ರಶಸ್ತಿ ಈ ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ಲಭಿಸಿದ್ದು, ಅಭಿನಂದನೆಗಳು ಎಂದರು.
ಕೆಂಪೇಗೌಡ ಥೀಮ್ ಪಾರ್ಕ್ ಯೋಜನೆ ಜವಾಬ್ದಾರಿಯನ್ನು ಸಚಿವ ಕೃಷ್ಣಬೈರೇಗೌಡ ವಹಿಸಿಕೊಂಡಿದ್ದು, ಮುಂದಿನ 3-4 ತಿಂಗಳಲ್ಲಿ ಅಂತಿಮ ರೂಪ ನೀಡಲಾಗುವುದು.

5 ಎಕರೆ ಜಾಗ ನೀಡಿದ್ದೇವೆ
ಕೆಂಪೇಗೌಡ ಜಯಂತಿ ಆಚರಣೆ ಆರಂಭಿಸಿದ್ದು ನಾವೇ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಾವೇ, 5 ಎಕರೆ ಜಾಗವನ್ನೂ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ, ಸರ್ಕಾರದಲ್ಲಿ ಪವರ್ ಸೆಂಟರ್ ಜಾಸ್ತಿಯಾಗಿವೆ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ, ಅವರೊಂದಿಗೆ ಚರ್ಚಿಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

