ಬೆಂಗಳೂರು:ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಮತ್ತು ಜನರು ಸಂತೃಪ್ತರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ದಸರಾ ಮಹೋತ್ಸವ ಅದ್ದೂರಿಯಾಗಿ ಆಚರಿಸಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದಕ್ಕಾಗಿ ಸರ್ಕಾರ ಎಷ್ಟು ಹಣವನ್ನಾದರೂ ನೀಡಲಿದೆ ಎಂದಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ-೨೦೨೫ ಆಚರಣೆ ಕುರಿತು ನಡೆದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದರು.
ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ
ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ, ಇದಕ್ಕೆ ಪೂರಕವಾಗಿ ದಸರಾ ಆಚರಿಸಿ.
ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು, ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ, ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ನೀಡಿ.
ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಕೆಎಸ್‌ಸಿಎ ಕ್ರೀಡಾಂಗಣ ಸಮೀಪ ಸಂಭವಿಸಿದ ಕಾಲ್ತುಳಿತ ದುರಂತ ಗಮದಲ್ಲಿಟ್ಟುಕೊಂಡ ಮುಖ್ಯಮಂತ್ರಿ, ಈ ಬಾರಿಯ ದಸರಾ ಉತ್ಸವಕ್ಕೆ ಹೆಚ್ಚಿನ ಜನ ಸೇರುವ ಸಾಧ್ಯತೆ ಇದ್ದು, ಪೋಲಿಸರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅಲ್ಲದೆ, ಜನಸ್ನೇಹಿಯಾಗಿ ಪ್ರವಾಸಿಗರೊಂದಿಗೆ ಪ್ರೀತಿಯಿಂದ ವರ್ತಿಸುವಂತೆ ಸಭೆಯಲ್ಲಿದ್ದ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.
ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ
ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ೧೦ ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಾಧ್ಯತೆ ಇದೆ, ವಿದೇಶಿ ಪ್ರವಾಸಿಗರೂ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ, ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸಬೇಕು.
ಅರಮನೆ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಕಳೆದ ಬಾರಿಗಿಂತ ಕಡಿಮೆ ಮಾಡಿ ಜನದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಿ.
ಕಳೆದ ವರ್ಷ ದಸರಾ ಆಚರಣೆಗೆ ೪೦ ಕೋಟಿ ರೂ. ಅನುದಾನ ಒದಗಿಸಲಾಗಿತ್ತು, ಈ ಬಾರಿ ಇನ್ನೂ ಅದ್ದೂರಿಯಾಗಿರಲಿ, ಮೈಸೂರು ನಗರದ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಿ, ದೀಪಾಂಲಕಾರ ವಿಜೃಂಭಣೆಯಿಂದಿರಲಿ.

ಗಾಂಧೀಜಿ ವಿಚಾರಧಾರೆಗೂ ಅವಕಾಶ
ಸರ್ಕಾರದ ಸಾಧನೆ ಮತ್ತು ಇಲಾಖಾ ಕಾರ್ಯಕ್ರಮಗಳನ್ನು ಸಮರ್ಥವಾಗಿ ಬಿಂಬಿಸುವ ವಸ್ತು ಪ್ರದರ್ಶನ, ಸ್ತಬ್ಧಚಿತ್ರ ಪ್ರದರ್ಶನ ಆಯೋಜಿಸಬೇಕು, ಅಕ್ಟೋಬರ್ 2ರಂದು ವಿಜಯದಶಮಿ ಇರುವ ಕಾರಣ ಸ್ತಬ್ಧಚಿತ್ರಗಳಲ್ಲಿ ಗಾಂಧೀಜಿ ವಿಚಾರಧಾರೆಗಳಿಗೂ ಅವಕಾಶ ಕಲ್ಪಿಸಬೇಕು.
ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಬೇಕು, ಪ್ರತಿ ಇಲಾಖೆಯಲ್ಲಿ ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳ ಕುರಿತು ಸಮರ್ಥವಾಗಿ ಮನವರಿಕೆ ಆಗುವಂತೆ ಯೋಜನೆ ರೂಪಿಸಬೇಕು.
ಸೆಪ್ಟೆಂಬರ್ 22ರಂದು ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದೆ, ಅಕ್ಟೋಬರ್ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ, ಈ ಬಾರಿ ದಸರಾ 10 ದಿನಗಳ ಬದಲು 11 ದಿನಗಳ ಆಚರಣೆಯಾಗಲಿದೆ.
ರಸ್ತೆಗಳ ದುರಸ್ತಿ ಕೈಗೆತ್ತಿಕೊಳ್ಳಿ
ವಿಶ್ವವಿಖ್ಯಾತ ದಸರಾ ಪರಂಪರೆ ಮುಂದುವರೆಸುವಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆ, ಕೆಆರ್‌ಎಸ್ ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಿ ಎಂದು ಆದೇಶಿಸಿದರು.
ವಸ್ತು ಪ್ರದರ್ಶನದ ಮಳಿಗೆಗಳು ಉದ್ಘಾಟನೆ ಸಂದರ್ಭದಲ್ಲೇ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿರಬೇಕು, ಯಾವುದೇ ಮಳಿಗೆ ಖಾಲಿ ಇರಬಾರದು, ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಡ್ರೋಣ್ ಶೋ ಆಯೋಜಿಸಿ.
ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಗೋಲ್ಡ್ ಕಾರ್ಡ್ ವಿತರಿಸಬೇಕು, ದಸರಾ ವೀಕ್ಷಿಸಲು ಆಗಮಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯ, ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು.

ದೂರುಗಳಿಗೆ ಆಸ್ಪದ ನೀಡಬಾರದು
ದಸರಾ ವೇಳೆ ಅಧಿಕಾರಿಗಳು ಜನಸಾಮಾನ್ಯರಿಗೆ ದೊರೆಯುವುದಿಲ್ಲ ಎಂಬ ದೂರುಗಳಿದ್ದು, ಈ ಬಾರಿ ಅವಕಾಶ ಇಂತಹ ದೂರುಗಳಿಗೆ ಆಸ್ಪದ ನೀಡಬಾರದು, ಜನಸಾಮಾನ್ಯರ ಕೆಲಸ ಕಾರ್ಯಗಳು, ಅಭಿವೃದ್ಧಿ ಕಾರ್ಯಗಳು ಯಾವುದೇ ಕಾರಣಕ್ಕೂ ಕುಂಠಿತವಾಗಬಾರದು.
ಈ ಬಾರಿ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುವುದನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಳೆದ ಬಾರಿ ಅರಮನೆ ಮುಂದೆ ಆಸನ ವ್ಯವಸ್ಥೆಯನ್ನು 54ಸಾವಿರಕ್ಕೆ ಹೆಚ್ಚಿಸಲಾಗಿತ್ತು, ಇದರಿಂದಾಗಿ ಜಂಬೂ ಸವಾರಿ ಸಂದರ್ಭದಲ್ಲಿ ಜನದಟ್ಟಣೆ ಉಂಟಾಗಿತ್ತು, ಈ ಬಾರಿ ಜನದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ, ಕಾರ್ಯಕ್ರಮ ಸ್ಥಳಗಳಲ್ಲಿ ಜನದಟ್ಟಣೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಆಸನ ಸ್ಥಳಾವಕಾಶ ಹೆಚ್ಚಿಸಿ
ಸ್ಥಳೀಯ ಶಾಸಕ ತನ್ವೀರ್ ಸೇಠ್ ಮಾತನಾಡಿ, ಮೈಸೂರು ದಸರಾ ಪ್ರಾಧಿಕಾರ ಸ್ಥಾಪಿಸಿ, ಅದರ ಮೂಲಕ ದಸರಾ ವ್ಯವಸ್ಥಿತ ಆಚರಿಸಬೇಕು, ಕುಳಿತುಕೊಳ್ಳುವ ಸ್ಥಳಾವಕಾಶ ಹೆಚ್ಚಿಸಬೇಕು, ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿದ್ದು, ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ, ನದಿಗಳು ತುಂಬಿ ಹರಿಯುತ್ತಿವೆ, ಕೆಆರ್‌ಎಸ್ ಈ ಬಾರಿ ಬೇಗನೇ ಭರ್ತಿಯಾಗಿದೆ, ಜಂಬೂ ಸವಾರಿ ಸಂದರ್ಭದಲ್ಲಿ ಕಲಾ ತಂಡಗಳನ್ನು ಹೊರತುಪಡಿಸಿ ಬೇರೆ ಯಾರೂ ಓಡಾಡಲು ಅವಕಾಶ ಮಾಡಬಾರದು, ಕಲಾ ತಂಡಗಳಲ್ಲಿ ವೈವಿಧ್ಯತೆ ಇರಬೇಕು ಎಂದರು.


