ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಹೊಣೆ ಹೊರಿಸಿ ನಗರ ಹೆಚ್ಚುವರಿ ಪೋಲಿಸ್ ಆಯುಕ್ತ, ಐಪಿಎಸ್ ಅಧಿಕಾರಿ ವಿಕಾಸ್‌ಕುಮಾರ್ ಅಮಾನತು ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಇಂದು ರದ್ದುಪಡಿಸಿರುವುದು ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
ನ್ಯಾಯಮೂರ್ತಿ ಬಿ.ಕೆ.ಶ್ರೀವಾತ್ಸವ ಮತ್ತು ಸಂತೋಷ್ ಮೆಹ್ರಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದ್ದು, ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ತಕ್ಷಣ ಸೇವೆಗೆ ಮರುನಿಯೋಜಿಸಬೇಕು, ಹಿಂದಿನ ಎಲ್ಲಾ ಭತ್ಯೆ, ಸೌಲಭ್ಯ ಒದಗಿಸಬೇಕು ಎಂದು ನಿರ್ದೇಶನ ನೀಡಿದೆ.
ಆರ್‌ಸಿಬಿ ಆಡಳಿತವೇ ಕಾರಣ
ಐಪಿಎಸ್ ಅಧಿಕಾರಿಯ ಅರ್ಜಿಯ ವಿಚಾರಣೆ ನಡೆಸಿದ ಸಿಎಟಿ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 3 ರಿಂದ 5 ಲಕ್ಷ ಜನ ಸೇರಲು ಆರ್‌ಸಿಬಿ ಆಡಳಿತವೇ ಕಾರಣ, ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ಪಡೆಯದೇ ಸಂಭ್ರಮಾಚರಣೆಗೆ ಕರೆ ನೀಡಲಾಗಿದೆ, ಕಡಿಮೆ ಅವಧಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಪೊಲೀಸರಿಂದ ಸಾಧ್ಯವಿಲ್ಲ.
ಆರ್‌ಸಿಬಿ ಸೃಷ್ಟಿಸಿದ ಗೊಂದಲದಿಂದಾಗಿಯೇ ಜನದಟ್ಟಣೆಯಾಗಿದೆ, ಪೊಲೀಸ್ ಸಿಬ್ಬಂದಿ ಸಹಾ ಮನುಷ್ಯರೇ, ಅಷ್ಟೊಂದು ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಮಂತ್ರವಾದಿಗಳಲ್ಲ, ದೇವರಲ್ಲ, ಪೊಲೀಸರ ಬಳಿ ಅಲ್ಲಾವುದ್ದೀನ್ ದೀಪವಿಲ್ಲ, ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಪೊಲೀಸರಿಗೆ ಸಮಯ ನೀಡಬೇಕಿತ್ತು.
ಸೂಕ್ತ ಕಾರಣಗಳಿಲ್ಲದಿದ್ದರೂ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ, ಕಾರ್ಯಕ್ರಮ ಆಯೋಜಕರಿಗೆ ಪೊಲೀಸರು ಅನುಮತಿ ನೀಡಿಲ್ಲ.
ನ್ಯಾಯಪೀಠ ವಿಶ್ವಾಸ
ನ್ಯಾಯಪೀಠದ ಆದೇಶದ ಅನುಕೂಲವನ್ನು ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಅಮಾನತುಗೊಂಡ ಇತರ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗೂ ಆದೇಶದ ಅನುಕೂಲವನ್ನು ಸರ್ಕಾರ ನೀಡುತ್ತದೆ ಎಂಬ ವಿಶ್ವಾಸವಿದೆ ಎಂಬುದಾಗಿ ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಪೋಲಿಸ್ ಅಧಿಕಾರಿ ವಿಕಾಸ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು.
ಐಪಿಎಲ್‌ನ 2025ರ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ಆಚರಣೆಯನ್ನು ಆತುರಾತುರವಾಗಿ ಜೂನ್ 3 ರಂದು ನಡೆಸಲು ಮುಂದಾದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಕ್ರೀಡಾಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು.

ಸಿಐಡಿಗೆ ತನಿಖೆ ಹೊಣೆ
ಪ್ರಕರಣ ಸಂಬಂಧ ಸರ್ಕಾರ ನಗರ ಪೊಲೀಸ್ ಆಯುಕ್ತ ದಯಾನಂದ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು, ಅಲ್ಲದೆ, ಘಟನೆ ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶಿಸಿತ್ತು.
ಘಟನೆ ಸಂಬಂಧ ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ, ಸುನಿಲ್ ಮ್ಯಾಥ್ಯೂ, ಕಿರಣ್, ಶಮಂತ್ ಅವರನ್ನು ಬಂಧಿಸಿದ ಸಿಐಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧಿತರ ಕಸ್ಟಡಿಗೆ ಮನವಿ ಮಾಡಿತ್ತಾದರೂ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತ್ತು.

