ಮಂಡ್ಯ :ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ಎಲ್ಲಿರುತ್ತದೆಯೋ ಆ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಜೊತೆಗಿನ ಚುನಾವಣಾ ಮೈತ್ರಿಗೆ ಯಾವುದೇ ಭಂಗವಿಲ್ಲ, ಪಕ್ಷ ಸಂಘಟನೆ ದೃಷ್ಟಿಯಿಂದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದರೆ, ನಾವೇ ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ಇಳಿಯುತ್ತೇವೆ ಎಂಬ ಅರ್ಥವಲ್ಲ.
ಪಕ್ಷ ಸಂಘಟನೆಗಾಗಿ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆಯೇ ಹೊರತು ನಮ್ಮ ಮೈತ್ರಿ ಪಕ್ಷದ ವಿರುದ್ಧವಲ್ಲ, ಮೈತ್ರಿ ಬಗ್ಗೆ ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದರು.
ಪಕ್ಷ ಸಂಘಟನೆ ಮಾಡುತ್ತೇವೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಮಾಡುತ್ತೇವೆ ಎಂದಾಕ್ಷಣ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇವೆ ಎಂದಲ್ಲ, ನಮಗೆ ಆ ಶಕ್ತಿಯೂ ಇಲ್ಲ.
ವಿಧಾನಸಭೆ ಸೇರಿದಂತೆ ಯಾವುದೇ ಚುನಾವಣೆ ಎದುರಾದರೂ ಮೈತ್ರಿಯಿಂದಲೇ ಕಣಕ್ಕಿಳಿಯುತ್ತೇವೆ, ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ದೆಹಲಿ ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಲು ಆಸಕ್ತಿ ತೋರದ ಕುಮಾರಸ್ವಾಮಿ, ಅವರಲ್ಲಿ ಯಾರು ಅಧಿಕಾರದಲ್ಲಿ ಇದ್ದರೇನು, ಇಲ್ಲದಿದ್ದರೇನು, ನನಗೂ ಅದಕ್ಕೂ ಸಂಬಂಧವಿಲ್ಲ.

ಹೃದಯಾಘಾತದಿಂದ ಸಾವು
ಹೃದಯಾಘಾತದಿಂದ ರಾಜ್ಯಾದ್ಯಂತ ಸಾವುಗಳು ಸಂಭವಿಸುತ್ತಿವೆ, ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿತ್ತು, ಆದರ, ಏನೂ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಸ್ಯೆ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಇಡೀ ರಾಜ್ಯದಲ್ಲಿ ಉಂಟಾಗಿದೆ, ಇದಕ್ಕಾಗಿ ಪಕ್ಷದ ವತಿಯಂದಲೇ ಸಾರ್ವಜನಿಕರ ಉಚಿತ ಆರೋಗ್ಯ ತಪಾಸಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

