ಬೆಂಗಳೂರು:ಸರ್ಕಾರ ರಚನೆ ವೇಳೆ ಎರಡು ವರ್ಷದ ನಂತರ ಅಧಿಕಾರ ಹಸ್ತಾಂತರ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮೊರೆ ಹೋಗಿದ್ದಾರೆ.
ದೆಹಲಿಯ ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಗಳ ಕಾಲ ಚರ್ಚಿಸಿದ್ದಾರೆ.
ಗೌಪ್ಯ ಭೇಟಿ ಉದ್ದೇಶ
ಸೋನಿಯಾ ಗಾಂಧಿ ಭೇಟಿ ಉದ್ದೇಶದಿಂದಲೇ ಶಿವಕುಮಾರ್ ದೆಹಲಿಯ ನೂತನ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ತಂಗದೆ, ತಮ್ಮ ಖಾಸಗಿ ಮನೆಯಲ್ಲಿ ಉಳಿದುಕೊಂಡಿದ್ದರು.
ಸೋನಿಯಾ ಗಾಂಧಿ ಅವರೊಂದಿಗಿನ ಭೇಟಿ ಗೌಪ್ಯವಾಗಿಡುವ ಉದ್ದೇಶದಿಂದ ಕರ್ನಾಟಕ ಭವನದಲ್ಲಿ ಉಳಿದುಕೊಂಡಿರಲಿಲ್ಲ.
ಇಂದು ಬೆಳಗ್ಗೆ ನೇರವಾಗಿ ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ತೆರಳಿ ಸೋನಿಯಾ ಅವರ ಆರೋಗ್ಯ ವಿಚಾರಿಸಿ, ಕರ್ನಾಟಕದಲ್ಲಿನ ಪಕ್ಷದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಕ್ಕೆ ತಂದರು.
ಆದೇಶದಂತೆ ನಡೆದುಕೊಂಡಿದ್ದೇನೆ
ಸರ್ಕಾರ ರಚನೆ ವೇಳೆ ನಿಮ್ಮ ಆದೇಶದಂತೆ ನಡೆದುಕೊಂಡಿದ್ದೇನೆ, ಜೊತೆಗೆ ಪಕ್ಷ ಸಂಘಟನೆ ಹಾಗೂ ಉಪಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ.
ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲಾ ಸಲಹೆ-ಸೂಚನೆಗಳಿನ್ನು ಒಪ್ಪಿಕೊಂಡಿದ್ದೆ.

ಈಗ ಕಾಲ ಸನ್ನಿಹಿತವಾಗಿದೆ, ಅಧಿಕಾರ ಹಸ್ತಾಂತರಕ್ಕೆ ಸಂಪುಟದಲ್ಲಿ ಕೆಲವರ ಅಪಸ್ವರ ಕೇಳಿಬರುತ್ತಿದೆ, ಎಐಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಅವರಿಗೆ ಸೂಚಿಸಿ, ನನಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ.
2028ರಲ್ಲಿ ಪುನಃ ಅಧಿಕಾರಕ್ಕೆ
ತಮಗೆ ಅವಕಾಶ ಮಾಡಿಕೊಟ್ಟರೆ ಪಕ್ಷವನ್ನು ಮತ್ತಷ್ಟು ಬಲವರ್ಧನೆಗೊಳಿಸಿ, 2028ರಲ್ಲಿ ಪುನಃ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಶಿವಕುಮಾರ್ ಮಾತನ್ನು ಆಲಿಸಿದ ಸೋನಿಯಾ ಗಾಂಧಿ, ತಮಗೆ ಎಲ್ಲವೂ ತಿಳಿದಿದೆ, ಖರ್ಗೆ ಮತ್ತು ರಾಹುಲ್ ಗಾಂಧಿ ಅವರುಗಳು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
ಪಕ್ಷದ ಮೇಲೆ ನಿಮಗಿರುವ ನಿಷ್ಠೆ ಎಲ್ಲಾ ಅವಕಾಶವನ್ನು ನೀಡಲಿದೆ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಜಕೀಯ ವಿಷಯ ಚರ್ಚೆ
ಮಾತುಕತೆ ಸಂದರ್ಭದಲ್ಲಿ ಪ್ರಿಯಾಂಕಾ ಸಹಾ ಉಪಸ್ಥಿತರಿದ್ದು, ರಾಜಕೀಯ ವಿಷಯಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಪ್ರಿಯಾಂಕಾ ನಿವಾಸದಿಂದ ಕರ್ನಾಟಕ ಭವನಕ್ಕೆ ಅತ್ಯುತ್ಸಾಹದೊಂದಿಗೆ ಆಗಮಿಸಿದ ಶಿವಕುಮಾರ್, ಪತ್ರಿಕಾಗೋಷ್ಠಿ ನಡೆಸಿ, ನಿನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಸೋನಿಯಾ ಅವರನ್ನು ಭೇಟಿ ಮಾಡಿದ್ದಿರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ ಶಿವಕುಮಾರ್, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ್ದೇನೆ ಎಂಬುದಾಗಿ ಹೇಳುವ ಮೂಲಕ ವಿಷಯಕ್ಕೆ ತೆರೆ ಎಳೆದರು.

