ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಒಂದಿಬ್ಬರು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಆದರೆ, ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ.
ಅವರು ಮುಖ್ಯಮಂತ್ರಿ ಆಗಬೇಕು ಎಂಬುದಾಗಿ ಹೇಳುವವರಿದ್ದಾರೋ, ಅದೇ ರೀತಿ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದಾಗಿಯೂ ಹೇಳುವವರಿದ್ದಾರೆ.
ವರಿಷ್ಠರ ನಿರ್ಧಾರಕ್ಕೆ ಬದ್ಧ
ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.
ನಾನಷ್ಟೇ ಅಲ್ಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಾ ಬದ್ಧರಾಗಿರುತ್ತಾರೆ, ಆದರೆ, ನಾನು ಪೂರ್ಣಾವಧಿ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು.
ಸರ್ಕಾರ ರಚನೆ ವೇಳೆ, ನಮ್ಮ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂಬುದಾಗಿ ಹೈಕಮಾಂಡ್ ತಿಳಿಸಿದ್ದು, ಅದಕ್ಕೆ ನಾನು ಹಾಗೂ ಶಿವಕುಮಾರ್ ಬದ್ಧರಾಗಿರುವುದಾಗಿ ತಿಳಿಸಿದ್ದೇವೆ ಎಂದರು.
ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ
ನಾಯಕತ್ವ ಬದಲಾವಣೆ ಅಷ್ಟೇ ಅಲ್ಲ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸದ್ಯಕ್ಕಿಲ್ಲ, ನಿಗಮ-ಮಂಡಳಿಗಳಿಗೆ ಕಾರ್ಯಕರ್ತರ ನೇಮಕ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.
ಕಳೆದ ಎರಡು ದಿನಗಳಿಂದ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿಗೆ ದೆಹಲಿಯಲ್ಲೇ ಬಿಡಾರ ಹೂಡಿರುವ ಮುಖ್ಯಮಂತ್ರಿ, ಇಂದು ಕರ್ನಾಟಕ ಭವನದಲ್ಲಿ ವಿರಾಮವಾಗಿ ಸುದ್ದಿಗೋಷ್ಠಿ ನಡೆಸಿದ್ದಲ್ಲದೆ, ರಾಷ್ಟ್ರಮಟ್ಟದ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲೂ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ.

2023ರ ವಿಧಾನಸಭಾ ಚುನಾವಣೆ ಸಂದರ್ಭದ ಬೆಳವಣಿಗೆಯೇ 2028ಕ್ಕೂ ಮುಂದುವರೆಯಲಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.
ನಾಯಕತ್ವ ಬದಲಾವಣೆ ಪ್ರಸ್ತಾಪಿಸಿಲ್ಲ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಾಗಲಿ, ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಆಗಲಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಥವಾ ಅಧಿನಾಯಕ ರಾಹುಲ್ ಗಾಂಧಿಯಾಗಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.
ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಎಂಬುದಾಗಿ ಮಿಸ್ಟರ್ ಶಿವಕುಮಾರ್ ಅವರೇ ಹೇಳಿದ್ದಾರೆ, ಜುಲೈ 2ರಂದು ನಂದಿಬೆಟ್ಟದಲ್ಲಿ ನಾನು ಪೂರ್ಣಾವಧಿ ಮುಖ್ಯಮಂತ್ರಿ ಎಂಬುದಾಗಿ ಘೋಷಣೆ ಮಾಡಿದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯೂ ಇದ್ದರು, ನಂತರ ಸಂಪುಟ ಸಭೆಯೂ ನಡೆಯಿತು.
ಅದನ್ನೇ ನಾನು ಇಂದೂ ಪುನರುಚ್ಛರಿಸಿದ್ದೇನೆ, ಆದರೆ, ನಾಯಕತ್ವ ಸೇರಿದಂತೆ ಯಾವುದೇ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಇಬ್ಬರೂ ತಲೆಬಾಗುತ್ತೇವೆ ಎಂದು ಪದೇ ಪದೇ ಹೇಳಿದರು.

ಕೆಲವು ಶಾಸಕರ ಅಭಿಪ್ರಾಯ
ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬುದಾಗಿ ಪಕ್ಷದ ಕೆಲವು ಶಾಸಕರು ಹೇಳಿದ್ದಾರೆ, ಅದು ಅವರ ಅಭಿಪ್ರಾಯ, ಪಕ್ಷದ ಹೈಕಮಾಂಡ್ ಅಭಿಪ್ರಾಯವಲ್ಲ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ನಾಯಕತ್ವ ಕುರಿತು ಶಾಸಕರ ಬಳಿ ಯಾವುದೇ ಪ್ರಶ್ನೆ ಕೇಳಿಲ್ಲ, ಪಕ್ಷ ಸಂಘಟನೆ ಮತ್ತು ಗ್ಯಾರಂಟಿ ಅನುಷ್ಟಾನಕ್ಕೆ ಸೀಮಿತವಾಗಿ ಅಭಿಪ್ರಾಯ ಕೇಳಿದ್ದಾರೆ ಎಂದರು.

