ನವದೆಹಲಿ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಬೇಕಿದ್ದರೆ ಶಾಸಕರ ಪರೇಡ್ ನಡೆಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗದಿದ್ದಾಗ, ನಿನ್ನೆ ರಾತ್ರಿ ಖರ್ಗೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ನಿಲುವನ್ನು ಅವರ ಗಮನಕ್ಕೆ ತಂದಿದ್ದಾರೆ.
ಅಧಿಕಾರಕ್ಕೆ ಅಂಟಿಕೊಂಡಿಲ್ಲ
ಯಾವ ಕಾರಣಕ್ಕೆ ಶಿವಕುಮಾರ್ ಅವರಿಗೆ ಅಧಿಕಾರ ನೀಡಬಾರದೆಂಬ ಮಾಹಿತಿಯನ್ನು ಖರ್ಗೆ ಮುಂದಿಟ್ಟು, ನಾನೇನು ಅಧಿಕಾರಕ್ಕೆ ಅಂಟಿಕೊಂಡು ಕೂರಬೇಕೆಂದಿಲ್ಲ, ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ.
ಆದರೆ, ನನ್ನಿಂದ ತೆರವಾಗುವ ಸ್ಥಾನಕ್ಕೆ ಪರಿಶಿಷ್ಟ ಜಾತಿ, ವರ್ಗ ಇಲ್ಲವೇ ಹಿಂದುಳಿದ ಸಮುದಾಯದವರನ್ನೇ ಕೂರಿಸಿ.
ಪಕ್ಷಕ್ಕೆ ನಿಮ್ಮ ಸೇವೆ ಹೇಳಲಾಗದಷ್ಟಿದೆ, ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಅಧಿಕಾರ ವಹಿಸಿಕೊಳ್ಳುವುದಾದರೆ, ನಾನು ತಕ್ಷಣವೇ ಸ್ಥಾನ ತ್ಯಜಿಸಲು ಸಿದ್ಧ.
ನೀವೇ ಆಯ್ಕೆ ಮಾಡಿ
ಎಐಸಿಸಿ ಅಧ್ಯಕ್ಷ ಸ್ಥಾನ ತೆರವು ಸಾಧ್ಯವಿಲ್ಲವೆಂದಾದರೆ, ನೀವೇ ಮುಂದೆ ನಿಂತು ಪರಿಶಿಷ್ಟ ಜಾತಿ, ವರ್ಗ ಅಥವಾ ಹಿಂದುಳಿದ ಸಮುದಾಯದವರನ್ನು ಆಯ್ಕೆ ಮಾಡಿ.
ಶಿವಕುಮಾರ್ ಬಗ್ಗೆ ನಾನು ಹೆಚ್ಚು ಹೇಳುವ ಅಗತ್ಯವಿಲ್ಲ, ನಿಮಗೆ ಎಲ್ಲವೂ ತಿಳಿದಿದೆ, ಅವರಿಗೆ ಸಚಿವರು, ಶಾಸಕರ ಬೆಂಬಲವಿಲ್ಲ.
ಹೀಗಿದ್ದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಹೇಗೆ ಆಯ್ಕೆ ಮಾಡುತ್ತೀರಿ, ಇದನ್ನೇ ಸಚಿವರು ನಿಮ್ಮ ಬಳಿ ಹೇಳಿಕೊಂಡಿದ್ದಾರೆ.

ನನ್ನ ವಿಷಯ ಗಮನದಲ್ಲಿಡಿ
ನಾನು ಮಾಧ್ಯಮದ ಮುಂದೆಯೂ ಇದನ್ನೇ ಹೇಳಿದ್ದೇನೆ, ನೀವು ಯಾವ ತೀರ್ಮಾನ ಕೈಗೊಳ್ಳುವಿರೋ ತೆಗೆದುಕೊಳ್ಳಿ, ಆದರೆ, ನಾನು ಹೇಳಿದ ವಿಷಯವನ್ನು ಗಮನದಲ್ಲಿಡಿ.
ಇದು ನನ್ನೊಬ್ಬನ ನಿರ್ಧಾರವಲ್ಲ, ಸಚಿವರು, ಶಾಸಕರು ನನ್ನ ಮುಂದೆ ಹೇಳಿದ್ದು, ನಿಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ, ಅವರ ಅಭಿಪ್ರಾಯವನ್ನೂ ತಿಳಿಸಿದ್ದೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ಖರ್ಗೆ, ಕರ್ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಏನು ತೀರ್ಮಾನ ಕೈಗೊಳ್ಳುವರೋ ಅದೇ ಅಂತಿಮ, ಅದಕ್ಕೆ ನಾನು, ನೀವೂ ಬದ್ಧರಾಗಿರಬೇಕು.

ರಾಜಕೀಯ ನಿರ್ಧಾರ ಸ್ಥಿತಿಯಲ್ಲಿಲ್ಲ
ಬಿಹಾರ ವಿಧಾನಸಭಾ ಚುನಾವಣೆ ಎದುರಾಗಿರುವುದರಿಂದ ನಾವು ಯಾವುದೇ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ.
ಹೀಗಾಗಿಯೇ ರಾಹುಲ್ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಚುನಾವಣೆ ಮುಗಿಯಲಿ, ನಂತರ ಪಕ್ಷ ಇತ್ತ ಕಡೆ ಗಮನ ಹರಿಸಲಿದೆ ಎಂದು ಹೇಳಿ ಕಳುಹಿಸಿದ್ದಾರೆ.

