ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಂತರಿಕ ಬಿಕ್ಕಟ್ಟಿನಿಂದ ಪತನಗೊಳ್ಳಲಿದ್ದು ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗದಂತೆ ರಾಜ್ಯ ನಾಯಕರಿಗೆ ಬಿಜೆಪಿ ವರಿಷ್ಠರು ಸಂದೇಶ ನೀಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿನ ಒಳಜಗಳ ಮತ್ತಷ್ಟು ಉಲ್ಬಣಗೊಂಡು ಸರ್ಕಾರ ಪತನಗೊಳ್ಳುವ ಸ್ಥಿತಿಯೆಡೆಗೆ ಸಾಗುತ್ತಿದೆ.
ಅಧಿಕಾರ ಕಸಿದು ಶಿವಕುಮಾರ್ಗೆ
ಎಐಸಿಸಿ ಅಕ್ಟೋಬರ್-ನವೆಂಬರ್ನಲ್ಲಿ ಸಿದ್ದರಾಮಯ್ಯ ಅವರಿಂದ ಅಧಿಕಾರ ಕಸಿದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಲಿದೆ.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರವನ್ನೂ ವಹಿಸಿಕೊಳ್ಳುತ್ತಾರೆ, ಆದರೆ, ಇದು ಹೆಚ್ಚು ದಿನ ಉಳಿಯುವುದಿಲ್ಲ.
ನಮಗೆ ಬಂದಿರುವ ಮಾಹಿತಿಯಂತೆ ಅಧಿಕಾರ ಹಸ್ತಾಂತರವಾದ ದಿನದಿಂದಲೇ ಸಿದ್ದರಾಮಯ್ಯ ಆಪ್ತ ಸಚಿವರು ಮತ್ತು ಶಾಸಕರು ಭಿನ್ನಮತಕ್ಕೆ ನಾಂದಿ ಹಾಡಲಿದ್ದಾರೆ.
ಕಾಂಗ್ರೆಸ್ನಿಂದ ಸಿಡಿಯಲಿರುವ ಗುಂಪು
ಇದು ಯಾವ ಸ್ವರೂಪಕ್ಕಾದರೂ ತಿರುಗಬಹುದು, ಅಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ನಿಂದ ಸಿಡಿಯುವ ಯಾವುದೇ ಗುಂಪಿನೊಂದಿಗೆ ಕೈಜೋಡಿಸಿ ಸರ್ಕಾರ ರಚನೆ ಪ್ರಯತ್ನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ವರಿಷ್ಠರು, ಕರ್ನಾಟಕ ವಿಧಾನಸಭೆಗೆ 2026ರ ಮಾರ್ಚ್-ಏಪ್ರಿಲ್ ವೇಳೆಗೆ ಮಧ್ಯಂತರ ಚುನಾವಣೆ ಎದುರಾಗಬಹುದು, ಇದಕ್ಕಾಗಿ ಸಿದ್ಧರಾಗಿ ಎಂದಿದ್ದಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿನ ಬೆಳವಣಿಗೆ ಬಗ್ಗೆ ವಿಜಯೇಂದ್ರ, ಅಶೋಕ್ ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.
ಬಿಜೆಪಿ ವರಿಷ್ಠರ ಚಿಂತನೆ
ಕಳೆದ ಕೆಲವು ದಿನಗಳ ಹಿಂದೆ ವಿಜಯೇಂದ್ರ ಮತ್ತು ಅಶೋಕ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ವರಿಷ್ಠರು, ಆರು ದಿನ ಅಲ್ಲಿಯೇ ಉಳಿಸಿಕೊಂಡು, ಎಲ್ಲಾ ಮಗ್ಗುಲುಗಳಿಂದ ಮಾಹಿತಿ ಪಡೆದಿದ್ದಾರೆ.
ಇದಾದ ನಂತರ ಕುಮಾರಸ್ವಾಮಿ ಬಳಿಯೂ ಮಾಹಿತಿ ಪಡೆದಿದ್ದಾರೆ, ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡರೆ ನಾವು ಯಾವುದೇ ಗುಂಪಿನೊಂದಿಗೆ ಸೇರಿ ಮೈತ್ರಿ ಆಡಳಿತ ನಡೆಸುವುದು ಬೇಡ.
ಸಿದ್ದರಾಮಯ್ಯ ಆಡಳಿತ ವೈಖರಿಗೆ ಅಧಿಕಾರಿಗಳು ತಿರುಗಿಬಿದ್ದಿರುವುದಲ್ಲದೆ, ಜನರೂ ಬೇಸರಗೊಂಡಿದ್ದಾರೆ.
ಮಧ್ಯಂತರ ಚುನಾವಣೆ
ಸರ್ಕಾರ ಪತನ ಸನ್ನಿವೇಶದಲ್ಲಿ ಮಧ್ಯಂತರ ಚುನಾವಣೆ ಎದುರಿಸಿದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಕುಮಾರಸ್ವಾಮಿ ಅನಿಸಿಕೆಗೆ ಬೊಮ್ಮಾಯಿ, ಶೋಭಾ ಅದೇ ದಾಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆ ನಂತರ ಪ್ರಲ್ಹಾದ್ ಜೋಷಿ ಅವರನ್ನು ರಾಜ್ಯಕ್ಕೆ ಕಳುಹಿಸಿದ ವರಿಷ್ಠರು, ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಪರಿಹರಿಸುವ ಹೊಣೆಗಾರಿಕೆ ನೀಡಿದ್ದಾರೆ.
ಕಾಂಗ್ರೆಸ್ ಆಂತರಿಕ ಕಚ್ಚಾಟ
ಅವರು ಈ ದಿಸೆಯಲ್ಲಿ ಈಗಾಗಲೇ ಎರಡು ಸಭೆ ನಡೆಸಿದ್ದಾರೆ, ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಲ್ಲದೆ, ಕಾಂಗ್ರೆಸ್ನ ಆಂತರಿಕ ಕಚ್ಚಾಟದ ಪೂರ್ಣ ಚಿತ್ರಣ ಹೊರಬರುವವರೆಗೂ ರಾಜ್ಯ ಬಿಜೆಪಿ ನಾಯಕತ್ವ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿರಲು ತೀರ್ಮಾನಿಸಿದ್ದಾರೆ.
ಈ ಬೆಳವಣಿಗೆ ನಡುವೆ, ವಿಜಯೇಂದ್ರ ಅವರನ್ನು ವರಿಷ್ಠರು ಮತ್ತೆ ದೆಹಲಿಗೆ ಕರೆಸಿಕೊಂಡಿದ್ದಾರೆ.

