ಬೆಂಗಳೂರು:ಪರಿಶಿಷ್ಟ ಜಾತಿ ಪಟ್ಟಿಗೆ ಬೇಡ ಜಂಗಮ ಸಮುದಾಯ ಸೇರ್ಪಡೆಯನ್ನು ಬಹಿರಂಗವಾಗಿ ವಿರೋಧಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದೀಗ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಧಿಕಾರಿಗಳ ಮುಂಬಡ್ತಿಯಲ್ಲಿ ತಾರತಮ್ಯ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಖರ್ಗೆ, ಪರಿಶಿಷ್ಟ ಸಮುದಾಯದ ಅಧಿಕಾರಿಗಳಿಗೆ ಬಡ್ತಿ ವೇಳೆ ಎಲ್ಲಿ ಅನ್ಯಾಯವಾಗಿದೆ ಎಂಬುದನ್ನು ದಾಖಲೆ ಸಹಿತ ಒದಗಿಸಿ ಸರಿಪಡಿಸುವಂತೆ ಸಲಹೆ ನೀಡಿದ್ದಾರೆ.
ನಿಯಮ ಪಾಲನೆಯಾಗುತ್ತಿಲ್ಲ
ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ಮುಂಬಡ್ತಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ, ಈ ಕುರಿತು ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಿ.
ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರಿಗೆ ಮುಂಬಡ್ತಿಯಲ್ಲಿ ಸರ್ಕಾರವೇ ಹೊರಡಿಸಿರುವ ಅದೇಶ ಹಾಗೂ ಸುತ್ತೋಲೆಗಳ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸ್ಪಷ್ಟ ಆದೇಶ ನೀಡಿ ಎಂಬ ಸಲಹೆ ನೀಡಿದ್ದಾರೆ.

ಅಧಿಕಾರಿಗಳ ಅಸಮಾಧಾನ
ತಪ್ಪಿದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಅಸಮಾಧಾನ ಉಂಟಾಗಿ ಸರ್ಕಾರದ ಕೆಲಸ-ಕಾರ್ಯಗಳಿಗೆ ಕಷ್ಟವಾಗುತ್ತದೆ.
ಮುಂಬಡ್ತಿಯಲ್ಲಿ ಎದುರಾಗಿರುವ ತೊಡಕುಗಳ ನಿವಾರಣೆಗೆ ಗಮನಹರಿಸಿ ತಾರತಮ್ಯ ನಿವಾರಿಸಿ ಎಂದು ಮುಖ್ಯಮಂತ್ರಿ ಅವರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.


