ಬೆಂಗಳೂರು:ನಾಯಕತ್ವ ವಿಚಾರಕ್ಕೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಾನು ಬದ್ಧರಾಗಿರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ, ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬುದಾಗಿ ಹೇಳಿಕೊಂಡಿದ್ದ ಸಿದ್ದರಾಮಯ್ಯ, ಇಂದು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ಯಾವುದೇ ತೀರ್ಮಾನಕ್ಕೆ ಬದ್ಧ
ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿಯ ಮೊದಲ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕತ್ವ ಸೇರಿದಂತೆ ವರಿಷ್ಠರು ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿಗೆ ಬದ್ಧವಾಗಿರುತ್ತೇವೆ ಎಂದರು.
ಸಭೆ ನಿರ್ಣಯಗಳನ್ನು ಪ್ರಕಟಿಸಿದ ನಂತರ ಮಂಡಳಿ ಸಂಚಾಲಕ ಅನಿಲ್ ಜೈಹಿಂದ್, ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ವರ್ಚಸ್ಸನ್ನು ಕಾಂಗ್ರೆಸ್ ಇಡೀ ರಾಷ್ಟ್ರದಲ್ಲಿ ಬಳಕೆ ಮಾಡಕೊಳ್ಳಲಿದೆ ಎಂದರು.
ನಾಯಕರಿಂದ ಸ್ಪಷ್ಟ ಉತ್ತರ ಇಲ್ಲ
ಜೈಹಿಂದ್ ತಮ್ಮ ಹೇಳಿಕೆ ಮುಗಿಸುತ್ತಿದ್ದಂತೆ ಮಾಧ್ಯಮದವರು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹಿಂದುಳಿದ ವರ್ಗಗಳ ನಾಯಕ ಎಂಬುದಾಗಿ ಬಿಂಬಿಸುತ್ತಿದೆ, ಆದರೆ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಜೋರಾಗಿದೆಯಲ್ಲ ಎಂದಾಗ, ಸುದ್ದಿಗೋಷ್ಠಿಯಲ್ಲಿದ್ದ ನಾಯಕರಿಂದ ಸ್ಪಷ್ಟ ಉತ್ತರ ಬರಲಿಲ್ಲ.

ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಈ ಪ್ರಶ್ನೆ ಇಲ್ಲಿ ಅಪ್ರಸ್ತುತ, ಸಭೆಗೆ ಸಂಬಂಧಿಸಿದ್ದಲ್ಲ, ನೀವು ಕೇಳುವ ಪ್ರಶ್ನೆ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದರು.

