ಬೆಂಗಳೂರು:ಆಂಧ್ರಪ್ರದೇಶದ ಸಚಿವರು ಕರೆದಾಕ್ಷಣ ಯಾವ ಉದ್ಯಮಿಯೂ ಕರ್ನಾಟಕದಿಂದ ಹೋಗಿಬಿಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವನಹಳ್ಳಿಯಲ್ಲಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಅಗತ್ಯವಿದ್ದ ಭೂಮಿಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕಾಯಿತು, ಆದರೆ, ಉದ್ಯಮಿಗಳು ಕೇಳಿದ ಕಡೆ ಜಮೀನು ಕೊಡಲಾಗುವುದು ಎಂದರು.
ಕಾರ್ಯಪರಿಸರ ಅಗತ್ಯ
ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕ ಶೇ.65ರಷ್ಟು ಪಾಲು ಹೊಂದಿದೆ, ಜಾಗತಿಕ ಮಟ್ಟದಲ್ಲಿ ರಾಜ್ಯ ಮೂರನೇ ಅತ್ಯುತ್ತಮ ಕಾರ್ಯಪರಿಸರವಾಗಿದೆ, ಉದ್ಯಮಗಳಿಗೆ ಭೂಮಿ ಕೊಟ್ಟ ಮಾತ್ರಕ್ಕೆ ಕೈಗಾರಿಕೆಗಳ ಸ್ಥಾಪನೆ ಸಾಧ್ಯವಿಲ್ಲ, ಕಾರ್ಯಪರಿಸರ ಸಹಾ ಮಹತ್ತ್ವದ ಪಾತ್ರ ವಹಿಸುತ್ತದೆ.
ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಟ್ವೀಟ್ ನಾನೂ ನೋಡಿದ್ದೇನೆ, ನಾನೂ ಉತ್ತರ ಕೊಟ್ಟಿದ್ದೇನೆ, ನನಗೂ ಸಾಮರ್ಥ್ಯವಿದೆ, ಕರ್ನಾಟಕವೂ ಸಮರ್ಥವಾಗಿದೆ, ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್-ಟೆಕ್, ಐಟಿ ಸೇರಿದಂತೆ ಎಲ್ಲಾ ಉದ್ಯಮಗಳಿಗೂ ರಾಜ್ಯದ ಅನೇಕ ಕಡೆ ಭೂಮಿ ಇದೆ, ಒಬ್ಬ ಉದ್ಯಮಿಯೂ ರಾಜ್ಯದಿಂದ ಹೊರಹೋಗಲು ನಾನು ಬಿಡುವುದಿಲ್ಲ ಎಂದರು.
ಏರೋಸ್ಪೇಸ್ ಉದ್ಯಮಿಗಳಿಗೆ ಬರೀ ಭೂಮಿಯಲ್ಲ, ಜೊತೆಗೆ ನೀರು, ವಿದ್ಯುತ್ ಎಲ್ಲ ಕೊಡುತ್ತೇವೆ, ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ಪಾಲಿನ ನೀರು ಬಳಸಿಕೊಳ್ಳಲು 3,600ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನೆ ರೂಪಿಸಲಾಗಿದೆ.
ರಾಜ್ಯದ ಹಿತಾಸಕ್ತಿ ಮುಖ್ಯ
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಯಮಿಗಳ ಪರ ಮಾತನಾಡುತ್ತಿದ್ದಾರೆ, ದೇವನಹಳ್ಳಿ ರೈತರ ಜಮೀನು ಸ್ವಾಧೀನಕ್ಕೆ ಮುಂದಾಗಿದ್ದರೆ, ರೈತರ ಪರ ಇರುತ್ತಿದ್ದರು, ವಿರೋಧ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ, ನನಗೆ ರಾಜ್ಯದ ಹಿತಾಸಕ್ತಿ ಮುಖ್ಯ.

ಕೈಗಾರಿಕಾ ಇಲಾಖೆ ಪ್ರಗತಿ ಮತ್ತು ದೇವನಹಳ್ಳಿ ವಿದ್ಯಮಾನ ಕುರಿತು ಪಕ್ಷದ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಮಾಹಿತಿ ನೀಡಿದ್ದು, ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.

