ಮೈಸೂರು:ನಾಳೆ ಮೈಸೂರಿನಲ್ಲಿ ನಡೆಯಲಿರುವ ಸಮಾವೇಶ, ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಕೆಲಸವನ್ನು ಸಾರ್ವಜನಿಕರ ಮುಂದಿಡುವ ಕಾರ್ಯಕ್ರಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಟೀಕೆಗೆ ನಾಳೆ ಜನತೆ ಉತ್ತರಿಸಲಿದ್ದಾರೆ, ಬಿಜೆಪಿ ಆಡಳಿತದಲ್ಲಿ ಯಾವ ಅಭಿವೃದ್ಧಿ ಕಾರ್ಯ ಆಗಿದೆ ಎಂದರು.
2,600 ಕೋಟಿ ರೂ. ಯೋಜನೆ
ನಾಳೆ ನಡೆಯಲಿರುವ ಕಾರ್ಯಕ್ರಮ ಯಾರ ಶಕ್ತಿ ಪ್ರದರ್ಶನ ಅಲ್ಲ, ಅಭಿವೃದ್ಧಿಯ ಕಾರ್ಯಕ್ರಮವಾಗಿದೆ, ಸುಮಾರು 2,600 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ, ಮೈಸೂರು ಜಿಲ್ಲೆಯ ಎರಡು ಕ್ಷೇತ್ರ ಹಾಗೂ ಬೆಂಗಳೂರು ನಗರದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಪಕ್ಷ ಗೆದ್ದಿದೆ ಎಂದರು.
ಕೃಷ್ಣಾ ಜಲವಿವಾದ ನ್ಯಾಯಾಧೀಕರಣದ ಅವಧಿ ವಿಸ್ತರಿಸಿರುವುದಕ್ಕೆ ವಿರೋಧವಿಲ್ಲ, ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಅಧಿಸೂಚನೆಯನ್ನೇ ಹೊರಡಿಸಿಲ್ಲ, ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳ ನಡುವೆ ಅಂತರ ರಾಜ್ಯ ಜಲವಿವಾದವಿದೆ, ಕರ್ನಾಟಕಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಯಾವುದೇ ಅಡ್ಡಿಯಿಲ್ಲ, ತೀರ್ಪಿನನ್ವಯ ಯಾವುದೇ ನಷ್ಟವೂ ಆಗುವುದಿಲ್ಲ, ಆಲಮಟ್ಟಿ ಜಲಾಶಯ ಎತ್ತರ 524.26 ಮೀಟರ್‌ಗೆ ಹೆಚ್ಚಿಸಲು ಕೇಂದ್ರ ಅನುಮತಿ ನೀಡಿದೆ ಎಂದರು.
ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ತನಿಖಾ ಆಯೋಗದ ವರದಿ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
ಕಾನೂನು ರೀತ್ಯ ಕ್ರಮ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಎಸ್‌ಐಟಿ ತನಿಖೆ ಬಗ್ಗೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ, ಘಟನೆಗೆ ಸಂಬಂಧಿಸಿದಂತೆ ಪೋಲಿಸ್ ಒಬ್ಬರು 10 ವರ್ಷಗಳ ನಂತರ ಹೇಳಿಕೆ ನೀಡಿದ್ದು, ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು, ಪ್ರಕರಣ ತನಿಖೆ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ, ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಹುಸಿ ಕರೆ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ, ಸುಳ್ಳು ಹೇಳಿ ಅಪಪ್ರಚಾರ, ಪ್ರಚೋದನೆ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ರೂಪಿಸಲಾಗುತ್ತಿದೆ.

