ಬೆಂಗಳೂರು:ತಮಗೆ ಇಷ್ಟ ಬಂದಂತೆ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡೋಕೆ ರಾಜ್ಯ ಸರ್ಕಾರದ ಖಜಾನೆ ನಿಮ್ಮ ಕಾಂಗ್ರೆಸ್ ಪಾರ್ಟಿ ಫಂಡ್ ಅಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕ್ಷೇತ್ರದ ಅನುದಾನಕ್ಕಾಗಿ ವಿರೋಧಪಕ್ಷದ ಶಾಸಕರು ತಾಳ್ಮೆಯಿಂದ ಕಾಯಬೇಕು ಎಂದರೆ ಏನರ್ಥ, ತಮ್ಮ ಬಳಿ ತಗ್ಗಿ ಬಗ್ಗಿ ನಡೆಯಬೇಕು ಎನ್ನುವುದು ನಿಮ್ಮ ಮಾತಿನ ಅರ್ಥವೇ ಅಥವಾ ತಾಳ್ಮೆಯಿಂದ ಇರದಿದ್ದರೆ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎನ್ನುವ ಧಮ್ಕಿನಾ ಎಂದು ಹರಿಹಾಯ್ದಿದ್ದಾರೆ.
ಕನ್ನಡಿಗರ ಬೆವರಿನ ತೆರಿಗೆ
ಬೊಕ್ಕಸದಲ್ಲಿರುವುದು ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರ ಬೆವರಿನ ತೆರಿಗೆ ಹಣ, ಶಾಸಕರಿಗೆ ನಿಮ್ಮಿಷ್ಟದಂತೆ ಅನುದಾನ ಹಂಚಿಕೆ ಮೂಲಕ ಮಲತಾಯಿ ಧೋರಣೆ ಮಾಡುವುದನ್ನು ನಿಲ್ಲಿಸಿ, ಎಲ್ಲಾ ಕ್ಷೇತ್ರಗಳಿಗೂ ಸರಿಸಮನಾಗಿ ಅನುದಾನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಕಳೆದ 26 ತಿಂಗಳ ಆಡಳಿತದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರೂ ನಯಾ ಪೈಸೆ ಅನುದಾನ ಪಡೆಯಲಾಗದೆ ಕಾಂಗ್ರೆಸ್ ಶಾಸಕರು, ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲಾಗದ ಪರಿಸ್ಥಿತಿ ಎದುರಿಸುತ್ತಿರುವುದನ್ನು ಹೇಳಿಕೊಂಡಿದ್ದರು.
ಸೂಪರ್ ಮುಖ್ಯಮಂತ್ರಿ ರಣದೀಪ್ ಸಿಂಗ್ ಸುರ್ಜೇವಾಲ ಕರ್ನಾಟಕಕ್ಕೆ ನೀಡಿದ 6 ದಿನಗಳ ಭೇಟಿ ಹಾಗೂ ಆಡಳಿತಾರೂಢ ಪಕ್ಷದ ಶಾಸಕರು ಮತ್ತು ಸಚಿವರೊಂದಿಗೆ ನಡೆಸಿದ ಸಭೆಯ ಪರಿಣಾಮವಾಗಿ ಕಾಂಗ್ರೆಸ್ ಶಾಸಕರು ತಲಾ 50 ಕೋಟಿ ರೂ. ಅನುದಾನ ಗಿಟ್ಟಿಸಿಕೊಂಡಿದ್ದಾರೆ.
ಸೂಪರ್ ಸಿಎಂ ಸುರ್ಜೇವಾಲ
ಇದರಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದರೂ ಸೂಪರ್ ಮುಖ್ಯಮಂತ್ರಿ ಸುರ್ಜೇವಾಲ ಎಂಬುದು ಸಾಬೀತಾಗಿದೆ.
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಿಸಿಕೊಟ್ಟದ್ದಕ್ಕೆ ಸುರ್ಜೇವಾಲ ಅವರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ.

ನಮ್ಮ ಶಾಸಕರಿಗೂ ಅನುದಾನ ಕೊಡಿಸಿ
ಹಾಗೆಯೇ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೂ ಅನುದಾನ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ.
ನಿಮ್ಮ ಸೂಚನೆಯಿಂದ ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಅನುದಾನ ದೊರೆತರೆ ತಮಗೆ ವಿಶೇಷ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸುತ್ತೇವೆ, ಅನುದಾನ ಕೊಡಿಸುವಿರಾ ಎಂದು ಆರ್.ಅಶೋಕ್ ಮನವಿ ಮಾಡಿದ್ದಾರೆ.


