ಬೆಂಗಳೂರು:ಮುಖ್ಯಮಂತ್ರಿ ಗಾದಿ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಕುರ್ಚಿ ಪಡೆಯಲು ಡಿ.ಕೆ.ಶಿವಕುಮಾರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.
ಅಕ್ಟೋಬರ್-ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಕುರಿತು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ ಸಂದರ್ಭದಲ್ಲೇ ಇಬ್ಬರೂ ನಾಯಕರು ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿಗೆ ಸಮಯಾವಕಾಶ ಕೋರಿದ್ದಾರೆ.
ಭೇಟಿ ಸಮಯ ಮಾಹಿತಿ ಇಲ್ಲ
ಭೇಟಿ ಸಮಯ ನೀಡುವ ಬಗ್ಗೆ ಇದುವರೆಗೂ ಎಐಸಿಸಿಯಿಂದ ಯಾವುದೇ ಮಾಹಿತಿ ಇಲ್ಲ, ಆದರೆ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಬ್ಬರು ನಾಯಕರಿಗೂ ದೆಹಲಿಗೆ ಬರುವಂತೆ ಸೂಚಿಸಿದ್ದರು.
ಸುರ್ಜೇವಾಲ ಜೊತೆ ಈ ಮುಖಂಡರು, ಖಾಲಿ ಇರುವ 37 ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ 1,200 ನಿರ್ದೇಶಕರ ನೇಮಕ ಕುರಿತಂತೆ ಚರ್ಚಿಸಿ, ಅನುಮೋದನೆ ಪಡೆಯಲಿದ್ದಾರೆ.
ಜೊತೆಗೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮಕರಣ ಪಟ್ಟಿಯೂ ಅಂತಿಮಗೊಳ್ಳಲಿದೆ.
ಸುರ್ಜೇವಾಲ ನಿರ್ಣಯ ಅಂತಿಮ
ಈ ಎರಡೂ ವಿಷಯಗಳಲ್ಲಿ ಹೈಕಮಾಂಡ್ ಪರವಾಗಿ ಸುರ್ಜೇವಾಲ ಕೈಗೊಳ್ಳುವ ನಿರ್ಣಯವೇ ಅಂತಿಮ.
ಕೆಪಿಸಿಸಿ ಮಾಡಿದ ಶಿಫಾರಸುಗಳನ್ನು ಸುರ್ಜೇವಾಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ ಸಮಾಲೋಚಿಸಿ ಅನುಮೋದನೆ ಪಡೆದುಕೊಂಡಿದ್ದಾರೆ.
ಈ ಪಟ್ಟಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಸುರ್ಜೇವಾಲ ಹಸ್ತಾಂತರಿಸಲಿದ್ದಾರೆ.

ಪೂರ್ವ ನಿಯೋಜಿತ ಕಾರ್ಯಕ್ರಮ
ಸುರ್ಜೇವಾಲ ಭೇಟಿ ನಂತರ ಇಬ್ಬರೂ ಮುಖಂಡರು ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಕೆಲವು ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಎರಡು ದಿನಗಳ ದೆಹಲಿ ಪ್ರವಾಸ ಎಂಬುದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಚೇರಿ ಅಧಿಕೃತವಾಗಿ ತಿಳಿಸಿದೆಯಾದರೂ, ಇವರುಗಳು ಹಿಂತಿರುಗುವ ನಿರ್ದಿಷ್ಟ ದಿನ ನಿಗದಿಯಾಗಿಲ್ಲ.
ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪಕ್ಷದ ಅಧಿನಾಯಕರ ಜೊತೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪ್ರತ್ಯೇಕವಾಗಿ ಸಮಯ ಕೋರಿದ್ದಾರೆ.
ರಾಹುಲ್ ಭೇಟಿಗೆ ಯತ್ನ
ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ರಾಹುಲ್ ಗಾಂಧಿ ದೆಹಲಿಯಲ್ಲಿ ಲಭ್ಯರಿರುತ್ತಾರೆ, ಈ ಸಮಯ ಬಳಕೆ ಮಾಡಿಕೊಂಡು, ಅವರ ಭೇಟಿಗೆ ಪ್ರಯತ್ನಿಸಿದ್ದಾರೆ.
ಕಳೆದ ಬಾರಿ ರಾಹುಲ್ ಭೇಟಿಗಾಗಿ ಇಬ್ಬರು ಮುಖಂಡರು ದೆಹಲಿಗೆ ತೆರಳಿದ್ದರಾದರೂ, ಎರಡು-ಮೂರು ದಿನಗಳಾದರೂ ಭೇಟಿ ಸಾಧ್ಯವಾಗಿರಲಿಲ್ಲ.
ಭೇಟಿಗೂ ಮುನ್ನ ಮುಖ್ಯಮಂತ್ರಿ ಅವರು, ಪತ್ರಿಕಾಗೋಷ್ಠಿ ನಡೆಸಿ, ಮಾಧ್ಯಮಗಳಿಗೆ ಸಂದರ್ಶನ ನೀಡಿ, ರಾಜ್ಯ ನಾಯಕತ್ವ ಕುರಿತು ಬಹಿರಂಗ ಹೇಳಿಕೆ ನೀಡಿದ್ದೇ, ರಾಹುಲ್ ಭೇಟಿ ಸಾಧ್ಯವಾಗದಿರಲು ಕಾರಣ ಎನ್ನಲಾಗಿದೆ.


