ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳಿಗೆ ಈ ಬಾರಿಯೂ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಭೇಟಿ ಸಾಧ್ಯವಿಲ್ಲ.
ರಾಹುಲ್ ಭೇಟಿ ಸಾಧ್ಯವಾಗದಿದ್ದರೂ 35 ನಿಗಮ-ಮಂಡಳಿಗಳ ಅಧ್ಯಕ್ಷ ಪಟ್ಟಿಗೆ ಪಕ್ಷದ ವರಿಷ್ಠರಿಂದ ಹಸಿರು ನಿಶಾನೆ ದೊರಕಿಸಿಕೊಂಡಿದ್ದಾರೆ.
ದೆಹಲಿಯಲ್ಲೇ ಬಿಡಾರ
ವರಿಷ್ಠರ ಜೊತೆ ರಾಜಕೀಯ ವಿಚಾರ ಚರ್ಚೆ ಹಾಗೂ ಪಕ್ಷದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಳೆದ ಎರಡು ದಿನಗಳಿಂದ ಇಬ್ಬರು ಮುಖಂಡರು ದೆಹಲಿಯಲ್ಲೇ ಬಿಡಾರ ಹೂಡಿದ್ದಾರೆ.
ಸತತ ಮೂರನೇ ಬಾರಿ ರಾಹುಲ್ ಭೇಟಿಗಾಗಿ ಮಾಡಿದ ಪ್ರಯತ್ನ ಸಫಲವಾಗಿಲ್ಲ, ಮುಂದಿನ ವಾರ ಮತ್ತೆ ಬರುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಎಐಸಿಸಿ ತಿಳಿಸಿದೆ.
ಬಹುತೇಕ ಆಗಸ್ಟ್ 1ರಂದು ರಾಹುಲ್ ಭೇಟಿ ಸಾಧ್ಯತೆ ಇದ್ದು, ಜುಲೈ 31ರಂದೇ ದೆಹಲಿಗೆ ಬರುವಂತೆ ಹೇಳಿದೆ.
ಎಐಸಿಸಿ ಹಸಿರು ನಿಶಾನೆ
ಖಾಲಿ ಇರುವ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಹಾಗೂ 1,200 ನಿರ್ದೇಶಕರ ನೇಮಕಾತಿಗೆ ಎಐಸಿಸಿ ಹಸಿರು ನಿಶಾನೆ ತೋರಿದೆ.
ಆದರೆ, ವಿಧಾನ ಪರಿಷತ್‌ನ ತೆರವಾದ ನಾಲ್ಕು ಸದಸ್ಯ ಸ್ಥಾನಗಳಿಗೆ ನಾಮಕರಣ ಕುರಿತು ಗೊಂದಲ ಮುಂದುವರೆದಿದ್ದು, ಈ ಬಗ್ಗೆ ರಾಹುಲ್ ಅವರೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಕಳೆದ ಗುರುವಾರ ರಾತ್ರಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ನಿಗಮ-ಮಂಡಳಿ ಅಧ್ಯಕ್ಷ ಹಾಗೂ ನಿರ್ದೇಶಕರ ನೇಮಕಾತಿಗೆ ಅನುಮತಿ ಪಡೆದುಕೊಂಡರು.

ನೇಮಕಾತಿಗೆ ಭಿನ್ನಾಭಿಪ್ರಾಯ
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಇದ್ದಿದ್ದರಿಂದ ಸುರ್ಜೇವಾಲ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಕೆಲವು ಸಂಪುಟ ಸಚಿವರ ವರ್ತನೆ ಬಗ್ಗೆ ಸಭೆಯಲ್ಲೇ ಸುರ್ಜೇವಾಲ ಆಕ್ಷೇಪ ವ್ಯಕ್ತಪಡಿಸಿ, ಇವರ ಕುರಿತು ಗಮನಹರಿಸಿ ಎಂಬ ಕಿವಿಮಾತು ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಕರ್ನಾಟಕದ ಜನತೆ ದೊಡ್ಡ ಸಂಖ್ಯೆಯಲ್ಲಿ ಶಾಸಕರನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ.
ಅಹವಾಲು ಪರಿಹರಿಸಿ
ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಅಭಿವೃದ್ಧಿ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಅಹವಾಲು ಪರಿಹರಿಸಲು ಮುಂದಾಗಿ ಎಂದಿದ್ದಾರೆ.
ಶಾಸಕರು ಮತ್ತು ಸಚಿವರ ಜೊತೆ ನಾನು ನಡೆಸಿದ ಮುಖಾಮುಖಿ ಚರ್ಚೆಯ ಪೂರ್ಣ ವಿವರವನ್ನು ಎಐಸಿಸಿ ಅಧ್ಯಕ್ಷರಿಗೆ ತಲುಪಿಸಿದ್ದೇನೆ, ಅವರು ನೀಡಿದ ಸಲಹೆ-ಸೂಚನೆಯನ್ನು ನಿಮ್ಮ ಗಮನಕ್ಕೂ ತಂದಿದ್ದೇನೆ ಎಂದಿದ್ದಾರೆ.


