ಬೆಂಗಳೂರು:ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸಮಯ ಬಂದರೆ ದಲಿತರಿಗೆ ಅಧಿಕಾರ ನೀಡಬೇಕು ಎಂದು ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲು ಸಮುದಾಯ ಮುಂದಾಗಿದೆ.
ಸಮುದಾಯಕ್ಕೆ ಸೇರಿದ ಸಚಿವರು ಮತ್ತು ಶಾಸಕರು ಆಗಸ್ಟ್ 2ರಂದು ಡಾ.ಪರಮೇಶ್ವರ್ ಮನೆಯಲ್ಲೇ ಸಭೆ ಸೇರಿ ಈ ತೀರ್ಮಾನಕ್ಕೆ ಬರಲಿದ್ದಾರೆ.
ಚರ್ಚೆ ನೆಪದಲ್ಲಿ ರಾಜಕೀಯ
ಒಳ ಮೀಸಲಾತಿ ಗೊಂದಲ ಸರಿಪಡಿಸುವ ಚರ್ಚೆ ನೆಪದಲ್ಲಿ ರಾಜ್ಯ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆ.
ಅಂದಿನ ಸಭೆಗೆ ದಲಿತ ಸಮುದಾಯಕ್ಕೆ ಸೇರಿದ ಎಡಗೈ ಮತ್ತು ಬಲಗೈ ಗುಂಪಿನ ಜನಪ್ರತಿನಿಧಿಗಳಿಗೆ ಖುದ್ದು ಡಾ.ಪರಮೇಶ್ವರ್ ಅವರೇ ಸಂದೇಶ ರವಾನೆ ಮಾಡಿದ್ದಾರೆ, ಈ ಸಭೆಗೆ ಪರಿಶಿಷ್ಟ ಪಂಗಡದ ಸಚಿವರು ಮತ್ತು ಶಾಸಕರಿಗೆ ಆಹ್ವಾನ ಇಲ್ಲ.
ಕಳೆದ ಕೆಲವು ತಿಂಗಳ ಹಿಂದೆ ಇಂತಹದ್ದೇ ಠರಾವು ಹೊರಡಿಸುವುದರ ಜೊತೆಗೆ ತುಮಕೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನಕ್ಕೆ ಡಾ.ಪರಮೇಶ್ವರ್ ಖಾಸಗಿ ಹೋಟೆಲ್ನಲ್ಲಿ ಔತಣಕೂಟ ಸಭೆ ಏರ್ಪಡಿಸಿದ್ದರು.
ಸಭೆ ನಡೆಸುವ ಮಾಹಿತಿ
ದಲಿತ ಸಮುದಾಯಕ್ಕೆ ಸೇರಿದ ವರ್ಗಗಳು ಸಭೆ ನಡೆಸುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಐಸಿಸಿ ಮಧ್ಯಪ್ರವೇಶಿಸಿ ಡಾ.ಪರಮೇಶ್ವರ್ ಅವರಿಗೆ ಸಭೆ ಮುಂದೂಡುವಂತೆ ಆದೇಶಿಸಿತ್ತು.
ಅಧಿಕಾರ ಹಸ್ತಾಂತರ ವಿಷಯ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಾ ತಮಗೆ ರಾಜ್ಯದಲ್ಲಿ ಹೇಗೆ ಅವಕಾಶ ತಪ್ಪಿತು ಎಂಬ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಡಾ.ಪರಮೇಶ್ವರ್ ಒಳ ಮೀಸಲಾತಿ ವಿಚಾರವನ್ನೂ ಮುಂದಿಟ್ಟುಕೊಂಡು ಆಡಳಿತ ಪಕ್ಷದ ದಲಿತ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ.

ಸಮುದಾಯ ತೀರ್ಮಾನ
ಸಭೆಯಲ್ಲಿ ಮೂರು ನಿರ್ಣಯಗಳನ್ನು ಕೈಗೊಂಡು ವರಿಷ್ಠರಿಗೆ ಸಂದೇಶ ತಲುಪಿಸಲು ಈ ಸಮುದಾಯ ತೀರ್ಮಾನಿಸಿದೆ.
ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಸಂದರ್ಭ ಬಂದಲ್ಲಿ ಪಕ್ಷಕ್ಕೆ ಬೆನ್ನಲುಬಾಗಿರುವ ದಲಿತ ಸಮುದಾಯಕ್ಕೆ ಅವಕಾಶ ಮಾಡಿಕೊಡಬೇಕು.
ಹಿಂದೆ ಎರಡು-ಮೂರು ಬಾರಿ ನಮ್ಮ ಸಮುದಾಯಕ್ಕೆ ದೊರಕಬೇಕಾಗಿದ್ದ ಅವಕಾಶ ತಪ್ಪಿದೆ, ಈ ಬಾರಿ ನಮ್ಮನ್ನು ಕಡೆಗಣಿಸಬಾರದು ಎಂಬ ಸಂದೇಶ ರವಾನೆ ಮಾಡಲಿದ್ದಾರೆ.
ವರದಿ ಮೊದಲು ಚರ್ಚೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪರಮೇಶ್ವರ್, ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ನೀಡುವ ಮೊದಲು ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಸರಿ ಪಡಿಸಿಕೊಳ್ಳಲು ಸಭೆ ಕರೆಯಲಾಗಿದೆ, ಈ ವಿಚಾರದಲ್ಲಿ ಯಾರಿಗೂ ಬೇಸರ ಆಗುವುದು ಬೇಡ, ಚರ್ಚೆ ನಂತರ ಅಭಿಪ್ರಾಯಗಳು ಗೊತ್ತಾಗಲಿವೆ.
ಒಳ ಪಂಗಡಗಳ ಕುರಿತು ಚರ್ಚೆ ಮಾಡುವುದು ಸೂಕ್ತ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಲು ಯಾವುದೇ ಅಡ್ಡಿ ಇಲ್ಲ ಎಂದರು.


