ಬೆಂಗಳೂರು:ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘ ನಡೆಸಿದ ಮಾತುಕತೆ ವಿಫಲವಾಗಿದ್ದು, ಮಧ್ಯರಾತ್ರಿಯಿಂದಲೇ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ.
ಮಾತುಕತೆ ವಿಫಲವಾಗುತ್ತಿದ್ದಂತೆ ಖಾಸಗಿ ಬಸ್ ಹಾಗೂ ಇತರ ಪ್ರಯಾಣಿಕ ಸಾರಿಗೆ ಸೇವೆಗಳನ್ನು ಪಡೆದು ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸರ್ಕಾರ ಸೂಚಿಸಿದೆ.
ಬೇಡಿಕೆಗಳ ಈಡೇರಿಕೆಗೆ ಪಟ್ಟು
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಮ್ಮುಖದಲ್ಲಿ ನೌಕರರ ಸಂಘಟನೆಗಳ ಪ್ರತಿನಿಧಿಗಳು ನಡೆಸಿದ ಸುದೀರ್ಘ ಚರ್ಚೆಯಲ್ಲಿ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದರು.
ಈ ವೇಳೆ ನೌಕರರ ಕೆಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದರೂ ಸಂಘಟನೆಗಳು ಸಮ್ಮತಿಸದೆ ತಮ್ಮ ನಿಲುವಿಗೆ ಪಟ್ಟುಹಿಡಿದವು.
ಮಾತುಕತೆ ವಿಫಲಗೊಂಡಿದ್ದರಿಂದ ನಾಲ್ಕೂ ನಿಗಮಗಳ 28,000 ಬಸ್‌ಗಳನ್ನು ರಸ್ತೆಗಿಳಿಸುವುದಿಲ್ಲ, ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದರು.
ಮುಷ್ಕರದ ಹಾದಿ ಅನಿವಾರ್ಯ
ನಾವು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ, ನಮ್ಮ ಹಕ್ಕೋತ್ತಾಯಕ್ಕಾಗಿ ಅನಿವಾರ್ಯವಾಗಿ ಮುಷ್ಕರದ ಹಾದಿ ಹಿಡಿಯಬೇಕಾಗಿದೆ ಎಂದು ಸಂಘಟನೆಗಳು ತಿಳಿಸಿವೆ.
ಕಡಿಮೆ ವೇತನದಲ್ಲೇ ನಮ್ಮ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ, ಇದರಿಂದ ಅನಾಹುತಗಳೂ ಸಂಭವಿಸಿವೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ನಾವು ಮುಷ್ಕರದಿಂದ ಹಿಂದೆ ಸರಿಯುತ್ತೇವೆ, ಬೇಡಿಕೆ ಈಡೇರುವವರೆಗೂ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೌಕರರಿಗೆ 38 ತಿಂಗಳ ಬಾಕಿ ವೇತನ ಇನ್ನೂ ಬಿಡುಗಡೆ ಆಗಿಲ್ಲ, ಕನಿಷ್ಠ 24 ತಿಂಗಳ ಹಿಂಬಾಕಿ ನೀಡುವಂತೆ ಮಾಡಿದ ಮನವಿಗೆ 14 ತಿಂಗಳ ಬಾಕಿ ಮಾತ್ರ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ.

ಸರ್ಕಾರ ಭರವಸೆ ನೀಡಲಿಲ್ಲ
ವೇತನ ಪರಿಷ್ಕರಣೆ ಬಗ್ಗೆಯೂ ನಮಗೆ ಸರ್ಕಾರ ಯಾವುದೇ ಭರವಸೆ ನೀಡದ್ದರಿಂದ ಇಂತಹ ಕಠಿಣ ತೀರ್ಮಾನ ಕೈಗೊಳ್ಳಬೇಕಾಯಿತು ಎಂದು ಸಭೆ ನಂತರ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಸುದ್ದಿಗಾರರಿಗೆ ತಿಳಿಸಿದರು.
ಒಂದು ಲಕ್ಷಕ್ಕೂ ಹೆಚ್ಚು ನೌಕರರು ನಾಳೆ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ, ವೇತನ ಪರಿಷ್ಕರಣೆ, ಬಾಕಿ ಪಾವತಿ ಹಾಗೂ ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಿಸಬೇಕು, ವಿದ್ಯುತ್ ಚಾಲಿತ ಬಸ್‌ಗಳಲ್ಲಿ ಸಂಸ್ಥೆ ಚಾಲಕರನ್ನೇ ನಿಯೋಜಿಸಬೇಕು.
ಸಾರಿಗೆ ನಿಗಮವನ್ನು ಖಾಸಗೀಕರಣದತ್ತ ಕೊಂಡೊಯ್ಯಲು ನಡೆಸಿರುವ ಸಂಚಿಗೆ ಕೊನೆ ಹಾಡಬೇಕು, ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.


