ಬೆಂಗಳೂರು:ನಮ್ಮ ಮೆಟ್ರೊ ಇತಿಹಾಸದ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಜ್ಞಾನ ಅತ್ಯಲ್ಪ, ಈ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂಬ ಬಗ್ಗೆ ತಿಳಿದು ಮಾತನಾಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಸಂಸದರು ಮೆಟ್ರೋ ಯೋಜನೆ ಕೇಂದ್ರದ ಬಿಜೆಪಿ ಮಾಡಿರುವಂತೆ ಪ್ರಚಾರ ಪಡೆಯುತ್ತಾ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
ಇತಿಹಾಸ 2006ರದ್ದು
ನಮ್ಮ ಮೆಟ್ರೋ ಇತಿಹಾಸ ಆರಂಭವಾಗಿದ್ದು 2006ರಲ್ಲಿ ಧರಂ ಸಿಂಗ್ ಮುಖ್ಯಮಂತ್ರಿ ಆಗಿದ್ದಾಗ, ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಶಂಕುಸ್ಥಾಪನೆ ಮಾಡಿದ್ದರು.
ಮೆಟ್ರೋ ಸಾರ್ವಜನರ ಸಂಸ್ಥೆ ಯಾವುದೇ ಪಕ್ಷದ ಸ್ವತ್ತಲ್ಲ, ಬಿಜೆಪಿ ನಾಯಕರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಜಾಸ್ತಿ, ಏನೂ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ, ಬೇರೆಯವರ ಕೆಲಸವನ್ನು ನಾವೇ ಮಾಡಿದ್ದಾಗಿ ಹೇಳುತ್ತಾರೆ ಎಂದು ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಲ್ಲಿ ರಾಜ್ಯ ಸರ್ಕಾರ ದೊಡ್ಡ ಪಾಲುದಾರ, ಮೆಟ್ರೋ ಯೋಜನೆಯ ಫೇಸ್-1ರಲ್ಲಿ ಕರ್ನಾಟಕ ಸರ್ಕಾರ 30% (ಜಮೀನೂ ಸೇರಿ), ಕೇಂದ್ರ 25%, ಉಳಿದ 45% ಸಾಲದ ರೂಪದಲ್ಲಿ ಮೆಟ್ರೋ ಸಂಸ್ಥೆ ಪಡೆದಿತ್ತು.
50% ಮೆಟ್ರೋ ಸಂಸ್ಥೆ ಸಾಲ
ಫೇಸ್-2ನಲ್ಲಿ ಕರ್ನಾಟಕ 30% + ಜಮೀನು ಮತ್ತು ಹೆಚ್ಚುವರಿ ವೆಚ್ಚದ ಬಹುತೇಕ ಭಾಗ ರಾಜ್ಯದ್ದಾಗಿದೆ, ಕೇಂದ್ರದ ಪಾಲು ಕೇವಲ 20% ಮಾತ್ರ, ಉಳಿದ 50% ಮೊತ್ತ ಮೆಟ್ರೋ ಸಂಸ್ಥೆ ಸಾಲ ಪಡೆದಿದೆ.
ಫೇಸ್-3ರಲ್ಲಿ ಕರ್ನಾಟಕ 20% ಅನುದಾನ ಹಾಗೂ ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ ಸರ್ಕಾರ 20% ಹಾಗೂ ಉಳಿದ 60% ಅನುದಾನ ಸಾಲವಾಗಿ ಸಂಸ್ಥೆ ಪಡೆದಿದೆ, ಮೆಟ್ರೋ ಸಂಸ್ಥೆ ಸಾಲಕ್ಕೆ ಗ್ಯಾರಂಟಿ ಹಾಕಿರುವುದು ರಾಜ್ಯ ಸರ್ಕಾರ, ಮೆಟ್ರೋ ಸಂಸ್ಥೆ ಪಾವತಿಸದಿದ್ದರೆ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ 6 ಕಿ.ಮೀ. ಮಾತ್ರ ಮೆಟ್ರೋ ಆಗಿತ್ತು ಎಂಬುದಾಗಿ ತೇಜಸ್ವಿ ಸೂರ್ಯ ಹೇಳಿದ್ದರು, ಆದರೆ, ಮೊದಲ ಹಂತದ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ 42 ಕಿ.ಮೀ. ಯೋಜನೆ ಮಾಡಲಾಯಿತು, ಆರಂಭದಲ್ಲಿ 6,395 ಕೋಟಿ ರೂ. ಅಂದಾಜು ನಂತರ 14,405 ಕೋಟಿ ರೂ.ಗೆ ಏರಿಕೆಯಾಯಿತು.

ರಾಜ್ಯ ಸರ್ಕಾರ 24,064.30 ಕೋಟಿ ರೂ.
ಮೆಟ್ರೋ ಒಟ್ಟಾರೆ ಕಾಮಗಾರಿಯಲ್ಲಿ ರಾಜ್ಯ ಸರ್ಕಾರ 24,064.30 ಕೋಟಿ ರೂ. ನೀಡಿದರೆ, ಕೇಂದ್ರ ಸರ್ಕಾರ ನೀಡಿರುವುದು17,803.85 ಕೋಟಿ ರೂ., 4,35,498.53 ಕೋಟಿ ರೂ. ಸಾಲ ಪಡೆಯಲಾಗಿದೆ ಎಂದರು.
ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರದ ಜವಾಬ್ದಾರಿ ಇಲ್ಲವೇ, ಬೋಗಿಗಳು ಬರುವುದು ತಡವಾಗಿದ್ದು ಯಾರಿಂದ, ಪರಿಸರ ಇಲಾಖೆ ಅನುಮತಿ ನೀಡುವವರು ಯಾರು, ಎಲ್ಲ ಅನುಮತಿ ಕೇಂದ್ರ ಸರ್ಕಾರದ್ದಲ್ಲವೇ, ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ನಂತರ ಈ ಅನುಮತಿಗಳನ್ನು ಪಡೆಯಬೇಕು.
ಮಾರ್ಗ ಸುರಕ್ಷತೆ ಪ್ರಮಾಣಪತ್ರ ನೀಡುವವರು ಕೇಂದ್ರ ಸರ್ಕಾರ, ವಿಳಂಬಕ್ಕೆ ಕಾರಣ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣಕ್ಕಾಗಿಯೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ, ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹಾಕಿ ಅನುಮತಿ ಕೊಡಿಸಬೇಕಿತ್ತು, ನಮ್ಮ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರಿಗೆ ಒತ್ತಡ ಹಾಕಿದ್ದಾರೆ.
ಯೋಜನೆ ತಡವಾಗಿದ್ದು ಏಕೆ
ತಾಂತ್ರಿಕ ಸಮಸ್ಯೆಯನ್ನು ತೇಜಸ್ವಿ ಸೂರ್ಯ ಖುದ್ದಾಗಿ ಬಗೆಹರಿಸಿದ್ದರೆ ಯೋಜನೆ ತಡವಾಗಿದ್ದು ಏಕೆ, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೊತೆಯಾಗಿ ಸಾಗಬೇಕು, ಎಲ್ಲವನ್ನೂ ನಾವೇ ಮಾಡಿದ್ದೇವೆ, ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎನ್ನುವುದು ಸರಿಯಲ್ಲ.
ಭೂಸ್ವಾಧೀನ ಪ್ರಕ್ರಿಯೆ ರಾಜ್ಯ ಸರ್ಕಾರದ ಕೆಲಸ, ಕೇಂದ್ರ ಸರ್ಕಾರ ಅಥವಾ ರಕ್ಷಣಾ ಇಲಾಖೆ ಜಾಗ ಇದ್ದಾಗ ಬಿಟ್ಟುಕೊಡುತ್ತಾರೆ, ರೈಲ್ವೇ ಇಲಾಖೆಯ ಎಲ್ಲಾ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಜಮೀನು ಹಾಗೂ ವೆಚ್ಚದ 50% ಪಾಲು ಇರುತ್ತದೆ, ಆದರೆ ಬಾವುಟ ಹಾರಿಸಲು ದೆಹಲಿಯಿಂದ ಬರುತ್ತಾರೆ, ರಾಜ್ಯ ಸರ್ಕಾರಕ್ಕೆ ಆಹ್ವಾನವಿರುವುದಿಲ್ಲ ಎಂದರು.
ಶಿಷ್ಟಾಚಾರದ ಪ್ರಕಾರ ಎಲ್ಲರಿಗೂ ಆಹ್ವಾನವಿರುತ್ತದೆ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮೆಟ್ರೊ ಬರುವ ಹಿನ್ನೆಲೆಯಲ್ಲಿ ನನಗೂ ಆಹ್ವಾನ ನೀಡುತ್ತಾರೆ ಎಂದರು.
ಕೇಂದ್ರ ಸರ್ಕಾರ ಟಿಕೆಟ್ ದರ ಹೆಚ್ಚಳಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸುತ್ತದೆ, ವರದಿ ಅನುಮೋದನೆ ದೆಹಲಿ ಮೆಟ್ರೋ ಮಂಡಳಿಯಲ್ಲಿ ಆಗುತ್ತದೆ, ಇದರ ಮುಖ್ಯಸ್ಥರು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಂದರು.


