ಬೆಂಗಳೂರು:ಸಚಿವ ಸ್ಥಾನದಿಂದ ಪದಚ್ಯುತಗೊಂಡು ಅವಮಾನಿತರಾಗಿರುವ ಕೆ.ಎನ್.ರಾಜಣ್ಣ ವಿಧಾನಸಭಾ ಹಾಗೂ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸತ್ಯ ಹೇಳುವವರಿಗೆ ಪಕ್ಷದಲ್ಲಿ ಬೆಲೆಯಿಲ್ಲ, ಇಂತಹ ಕಡೆ ಮುಂದುವರೆಯಲು ಇಚ್ಛೆ ಇಲ್ಲ ಎಂದು ರಾಜಣ್ಣ ಹೇಳಿಕೊಂಡಿದ್ದಾರೆ.
ಪಕ್ಷದಲ್ಲೇ ಉಳಿಯುವಂತೆ
ಪಕ್ಷದಲ್ಲೇ ಉಳಿಯುವಂತೆ ರಾಜಣ್ಣ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರನ್ನು ನಿಯೋಜಿಸಿದ್ದಾರೆ.
ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಮುಗಿಯುತ್ತಿದ್ದಂತೆ, ಸೆಪ್ಟೆಂಬರ್ ಕ್ರಾಂತಿಯನ್ನು ಆಗಸ್ಟ್‌ನಲ್ಲೇ ಮಾಡಲು ಹೊರಟಿದ್ದಾರೆ.
ಸಚಿವ ಸ್ಥಾನದಿಂದ ವಜಾಗೊಳ್ಳುತ್ತಿದ್ದಂತೆ ರಾಜಣ್ಣ ತಮ್ಮ ಪುತ್ರನ ಮೂಲಕ ತಾವು ಪ್ರತಿನಿಧಿಸುವ ಮಧುಗಿರಿ ವಿಧಾನಸಭಾ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷರಿಗೆ ತಲುಪಿಸುವಂತೆ ಕಳುಹಿಸಿದ್ದರು.
ಪುತ್ರನ ಮೂಲಕ ರಾಜೀನಾಮೆ ಪತ್ರ
ವಿಧಾನ ಪರಿಷತ್ ಸದಸ್ಯರೂ ಆಗಿರುವ ರಾಜಣ್ಣ ಪುತ್ರ ಪತ್ರವನ್ನು ಸಭಾಧ್ಯಕ್ಷರಿಗೆ ನೀಡದೆ, ಮುಖ್ಯಮಂತ್ರಿ ಭೇಟಿ ಮಾಡಿ, ತಮ್ಮ ತಂದೆಯ ನಿರ್ಧಾರ ಮತ್ತು ಪತ್ರವನ್ನು ತಲುಪಿಸಿದರು.
ಪತ್ರ ಪಡೆದುಕೊಂಡ ಮುಖ್ಯಮಂತ್ರಿ, ಸಚಿವರಾದ ಸತೀಶ್ ಜಾರಕಿಹೊಳಿ, ಚಲುವರಾಯಸ್ವಾಮಿ ಹಾಗೂ ಡಾ.ಸುಧಾಕರ್ ಅವರನ್ನು ಕರೆಸಿಕೊಂಡು, ರಾಜಣ್ಣ ಪತ್ರದ ಬಗ್ಗೆ ಚರ್ಚೆ ನಡೆಸಿದರು.
ನಂತರ ಪತ್ರವನ್ನು ಜಾರಕಿಹೊಳಿ ಅವರಿಗೆ ನೀಡಿ, ನೀವು ಮೂವರೂ ರಾಜಣ್ಣ ಮನೆಗೆ ತೆರಳಿ ಮನವೊಲಿಸಿ, ದುಡುಕುವುದು ಬೇಡ, ಮುಂದೆ ಬೇರೆ ಪರಿಣಾಮಗಳು ಬೀರಬಹುದು ಎಂದು ಹೇಳಿ.

ಮುಖ್ಯಮಂತ್ರಿ ಸಲಹೆ
ನಾನು ಅವರ ಜೊತೆ ಮಾತನಾಡುವೆ ಎಂದು ತಿಳಿಸಿದ ನಂತರ ಸಚಿವರು, ರಾಜಣ್ಣ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಮಾಹಿತಿ ತಲುಪಿಸಿದರು.
ಇದಕ್ಕೆ ರಾಜಣ್ಣ, ನನ್ನನ್ನು ಸಂಪುಟದಿಂದ ಉಚ್ಛಾಟಿಸಲು, ಆ ಹಿರಿಯ ಮಂತ್ರಿಯೇ ಕಾರಣ, ಅಂತಹವರ ಜೊತೆ ಪಕ್ಷ ಮತ್ತು ಅಧಿವೇಶನದಲ್ಲೂ ಇರಲಾರೆ, ನನಗೆ ಯಾರ ಭಯವೂ ಇಲ್ಲ.
ದೆಹಲಿಯವರ ಮುಖ ನೋಡಿ ಕ್ಷೇತ್ರದಲ್ಲಿ ನನಗೆ ಮತ ಹಾಕುವುದಿಲ್ಲ, ನಮ್ಮ ಕಾರ್ಯಕರ್ತರು, ಸ್ನೇಹಿತರು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದು ಒಂದಷ್ಟು ವಿಷಯಗಳನ್ನು ಸಚಿವರ ಮುಂದಿಟ್ಟಿದ್ದಾರೆ.
ಕೋಪ ಶಮನ
ಡಾ.ಸುಧಾಕರ್, ಕೆಲವೊಂದು ವಿಷಯ ಪ್ರಸ್ತಾಪಿಸಿ, ರಾಜಣ್ಣ ಕೋಪ ಶಮನಗೊಳಿಸಿ, ರಾಜೀನಾಮೆ ಪತ್ರ ಹಿಂದೆ ಪಡೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು.
ಇಷ್ಟಾದರೂ ರಾಜಣ್ಣ, ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ, ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆ ನಂತರ ಜನರ ಮುಂದೆಯೇ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ.


