ಬೆಂಗಳೂರು:ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ವಿರುದ್ಧ ವರಿಷ್ಠರಿಗೆ ದೂರು ನೀಡಲು ಮಾಜಿ ಸಚಿವ ರಾಜಣ್ಣ ದೆಹಲಿಗೆ ತೆರಳಲಿದ್ದಾರೆ.
ಸಂಪುಟದಿಂದ ವಜಾಗೊಳಿಸಲು ಈ ಮೂವರು ನಾಯಕರ ಪಿತೂರಿಯೇ ಕಾರಣ ಎಂದು ರಾಜಣ್ಣ ಎಲ್ಲ ಮಾಹಿತಿಯೊಂದಿಗೆ ಲಿಖಿತ ದೂರು ನೀಡಲಿದ್ದಾರೆ.
ರಾಹುಲ್ ಹೋರಾಟ ಟೀಕಿಸಿಲ್ಲ
ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ರಾಷ್ಟ್ರಾದ್ಯಂತ ಮತಗಳ್ಳತನ ವಿರುದ್ಧ ನಡೆಸಿರುವ ಹೋರಾಟವನ್ನು ನಾನು ಟೀಕಿಸಿಲ್ಲ.
ನಮ್ಮದೇ ಆಡಳಿತದಲ್ಲಿ ನಡೆದಿರುವ ಲೋಪಗಳನ್ನು ಹೇಳಿದ್ದೇನೆ, ಜೊತೆಗೆ ಕೆಲವು ಸತ್ಯ ಘಟನೆಗಳನ್ನು ಬಹಿರಂಗಪಡಿಸಿದ್ದು ಕೆಲವು ನಾಯಕರಿಗೆ ಹಿಡಿಸದೆ, ನನ್ನ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ.
ನಾನು ಹೇಳದಿರುವುದನ್ನು ತಿರುಚಿ, ವರದಿ ಸಿದ್ಧಪಡಿಸಿದ ಚಂದ್ರಶೇಖರ್, ವರಿಷ್ಠರಿಗೆ ತಲುಪಿಸಿದ್ದಾರೆ, ಇದರಲ್ಲಿ ಸುರ್ಜೇವಾಲ ಪಾತ್ರ ದೊಡ್ಡದಿದೆ.
ಸತ್ಯ ಸಂಗತಿ ತಿಳಿಸುವೆ
ಈ ವಿಷಯವೂ ಸೇರಿದಂತೆ ಅನೇಕ ಸತ್ಯ ಸಂಗತಿಗಳನ್ನು ವರಿಷ್ಠರ ಮುಂದಿಡುವುದಾಗಿ ತಮ್ಮ ಆಪ್ತ ಸಚಿವರು ಹಾಗೂ ಶಾಸಕರ ಬಳಿ ರಾಜಣ್ಣ ತಿಳಿಸಿದ್ದಾರೆ.
ನನ್ನ ವಿರುದ್ಧದ ಶಿಸ್ತು ಕ್ರಮದಲ್ಲಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ, ಎಲ್ಲವೂ ಈ ಮೂವರ ಸಂಚು.
ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರನ್ನು ನಾನೂ ರಾಜಕೀಯವಾಗಿ ಬಿಡುವುದಿಲ್ಲ ಎಂದು ರಾಜಣ್ಣ ಗುಡುಗಿದ್ದಾರೆ.

ಷಡ್ಯಂತ್ರದಲ್ಲಿ ಮೂವರು ಪ್ರಮುಖರು
ನಿನ್ನೆ ಸ್ವಕ್ಷೇತ್ರ ಮಧುಗಿರಿಯಲ್ಲಿ ಷಡ್ಯಂತ್ರದ ಬಗ್ಗೆ ಮಾತನಾಡಿದರಾದರೂ, ಯಾರ ಹೆಸರನ್ನೂ ಪ್ರಸ್ತಾಪಿಸದೆ ಮೂವರು ಪ್ರಮುಖರು ಎಂದಿದ್ದರು.
ಈಗಾಗಲೇ ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿರುವರಾದರೂ, ಸಮಯ ನಿಗದಿಯಾಗಿಲ್ಲ.
ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಬಂದಾಗ ಭೇಟಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.
ದೆಹಲಿ ಭೇಟಿ ನಂತರ ಕೆಲವು ಮಹತ್ವದ ವಿಚಾರಗಳನ್ನು ಬಹಿರಂಗ ಪಡಿಸುವುದಾಗಿ ರಾಜಣ್ಣ ತಿಳಿಸಿದ್ದಾರೆ.


