ಬೆಂಗಳೂರು:ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತವೆಂದಾದರೆ, ದಲಿತ ಸಮುದಾಯಕ್ಕೇ ದಕ್ಕಬೇಕು ಎಂಬ ಹೋರಾಟ ತೀವ್ರಗೊಳಿಸಲು ಸಮುದಾಯದ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದೆ.
ದಲಿತರ ಒಳ ಮೀಸಲಾತಿ ವಿವಾದವನ್ನು ಸರ್ಕಾರ ಇತ್ಯರ್ಥಗೊಳಿಸಿದ ಬೆನ್ನಲ್ಲೇ ಎಡಗೈ-ಬಲಗೈ ಭಿನ್ನಾಭಿಪ್ರಾಯ ಮರೆತ ದಲಿತ ಸಮುದಾಯಗಳು ಒಗ್ಗೂಡಿ ದಾವಣಗೆರೆಯಲ್ಲಿ ಐತಿಹಾಸಿಕ ಸಮಾವೇಶ ನಡೆಸಲು ಸಜ್ಜಾಗಿವೆ.
30 ಲಕ್ಷ ದಲಿತರ ಸಮಾವೇಶ
ಅಕ್ಟೋಬರ್-ನವೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಉಂಟಾಗಲಿದೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ 30 ಲಕ್ಷ ದಲಿತರನ್ನು ಸೇರಿಸಿ ಸಮಾವೇಶ ನಡೆಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಲು ವರಿಷ್ಠರು ತೀರ್ಮಾನ ತೆಗೆದುಕೊಂಡರೆ, ಅಂತಹ ಸಮಯದಲ್ಲಿ ದಲಿತ ಸಮುದಾಯಕ್ಕೆ ಈ ಹುದ್ದೆ ನೀಡಬೇಕೆಂಬ ನಿರ್ಣಯವನ್ನು ಸಭೆ ಕೈಗೊಳ್ಳಲಿದೆ.
ಒಳ ಮೀಸಲಾತಿ ಹಂಚಿಕೆ ನಂತರ ಸಮುದಾಯದ ಎಲ್ಲ ಗುಂಪುಗಳು ಒಂದಾಗಿ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ.
ದಾವಣಗೆರೆ ಸಮಾವೇಶ
ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ವರಿಷ್ಠರನ್ನು ಒತ್ತಾಯಿಸುವ ಉದ್ದೇಶದಿಂದಲೇ ದಾವಣಗೆರೆ ಸಮಾವೇಶ ಆಯೋಜಿಸಲಾಗುತ್ತಿದೆ.
ಒಳ ಮೀಸಲಾತಿ ವಿವಾದ ಇತ್ಯರ್ಥ ಸಂಭ್ರಮದಲ್ಲಿ ನಡೆಯುವ ಈ ಸಮಾವೇಶದಲ್ಲಿ ಕರ್ನಾಟಕದಲ್ಲಿ ನಮ್ಮವರು ಮುಖ್ಯಮಂತ್ರಿ ಸ್ಥಾನಕ್ಕೇರಲು ಅನುವು ಮಾಡಿಕೊಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗುವುದು.
ಸ್ವಾತಂತ್ರ್ಯೋತ್ತರ ಕರ್ನಾಟಕದ ಇತಿಹಾಸಕ್ಕೆ ಎಂಟು ದಶಕಗಳು ಪೂರ್ಣಗೊಳ್ಳುತ್ತಿದ್ದು, ಇದುವರೆಗೆ ಒಬ್ಬ ದಲಿತ ನಾಯಕ ರಾಜ್ಯದ ಮುಖ್ಯಮಂತ್ರಿಯಾಗಿಲ್ಲ ಎಂಬುದು ಪ್ರತಿಪಾದನೆಯಾಗಿದೆ.

ಅಧಿಕಾರ ಹಂಚಿಕೆ ಒಪ್ಪಂದ
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಕೆಳಗಿಳಿಯಲಿದ್ದಾರೆ ಎಂಬ ಮಾತು ರಾಜ್ಯ ರಾಜಕೀಯ ವಲಯದಲ್ಲಿ ಇನ್ನೂ ಜೀವಂತವಾಗಿರುವುದೇ ದಲಿತ ಸಮಾವೇಶದ ಮೂಲ ಪ್ರೇರಣೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿರುವ ಅಧಿಕಾರ ಹಂಚಿಕೆ ಒಪ್ಪಂದ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಬ್ರೇಕ್ ಹಾಕಿದ್ದರಾದರೂ, ಅಧಿಕಾರ ಹಂಚಿಕೆ ಮಾತು ಬೂದಿ ಮುಚ್ಚಿದ ಕೆಂಡದಂತೆ ಇದ್ದೇ ಇದೆ.
ಸಮಾವೇಶದ ನಿರ್ಣಯಕ್ಕೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಒಪ್ಪಿಕೊಂಡರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ನಡೆಯುವ ನಾಯಕತ್ವ ಚುನಾವಣೆಯಲ್ಲಿ ದಲಿತ ನಾಯಕರೊಬ್ಬರು ಕಣಕ್ಕಿಳಿಯಲಿದ್ದಾರೆ.
ಕೊನೇ ಕ್ಷಣದಲ್ಲಿ ವಂಚಿತರು
ಈ ಹಿಂದೆ ಬಿ.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆಯ ಸನಿಹ ಬಂದಿದ್ದರೂ ಕೊನೇ ಕ್ಷಣದಲ್ಲಿ ವಂಚಿತರಾಗಿದ್ದರು.
ಆದರೆ, ಈ ಬಾರಿ ಸಿದ್ದರಾಮಯ್ಯ ಕೆಳಗಿಳಿಯುವುದು ನಿಶ್ಚಿತವಾದರೆ, ಅವರ ಜಾಗಕ್ಕೆ ದಲಿತ ನಾಯಕರೊಬ್ಬರು ಬರಬೇಕು, ಯಾವ ಕಾರಣಕ್ಕೂ ಅವಕಾಶ ತಪ್ಪಬಾರದು ಎಂಬ ಹಕ್ಕೊತ್ತಾಯದ ಐತಿಹಾಸಿಕ ದಲಿತ ಸಮಾವೇಶ ಇದಾಗಲಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ತಿರುವು ಪಡೆಯುವ ನಿರೀಕ್ಷೆಯಿದೆ.


