ಬೆಂಗಳೂರು:ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಹಾಗೂ ಪಕ್ಷದ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿದೇಶನಾಲಯ (ಇ.ಡಿ.) ದಾಳಿ ನಡೆಸಿದೆ.
ಕ್ಯಾಸಿನೊ, ಆನ್‌ಲೈನ್ ಬೆಟ್ಟಿಂಗ್ ಸೇರಿದಂತೆ ವಿವಿಧ ವ್ಯವಹಾರಗಳಿಗೆ ಸಂಬಂಧಿಸಿದಂತೆ 30 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದೆ.
ಕುಸುಮಾ ಹನುಮಂತರಾಯಪ್ಪ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ವ್ಯವಹಾರ ಆರೋಪ
ಕುಸುಮಾ ಅವರ ಸಹೋದರ ಅನಿಲ್ ಗೌಡ ಅವರು, ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಜೊತೆ ವ್ಯವಹಾರ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ದಾಳಿ ನಡೆದಿದೆ.
ಇ.ಡಿ. ನೀಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 6, ಬೆಂಗಳೂರಿನಲ್ಲಿ 10, ರಾಜಾಸ್ತಾನದ ಜೋಧ್‌ಪುರದಲ್ಲಿ 3, ಹುಬ್ಬಳ್ಳಿ 1, ಮುಂಬೈ 2, ಗೋವಾದ 8 ಕಡೆ ಸೇರಿದಂತೆ 30 ಕಡೆಗಳಲ್ಲಿ ದಾಳಿ ನಡೆಸಿದ್ದು, ಐದು ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಪತ್ತೆಯಾಗಿದೆ.
ಆನ್‌ಲೈನ್ ಬೆಟ್ಟಿಂಗ್
ಈ ಕ್ಯಾಸಿನೋ ಮೂಲಕ ಅಕ್ರಮ ಚಟುವಟಿಕೆ ಪತ್ತೆ ಹಚ್ಚಿದ್ದು, ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗ್ಯಾಂಬ್ಲಿಂಗ್ ಹೆಸರಿನಲ್ಲಿ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದರು.
ವೀರೇಂದ್ರ ಪಪ್ಪಿ ಸಹೋದರ ತಿಪ್ಪೇಸ್ವಾಮಿ, ದುಬೈನಿಂದ ಡೈಮೆಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್ ಹಾಗೂ ಪ್ರೈಮ್ 9 ಟೆಕ್ನಾಲಜೀಸ್ ವ್ಯವಹಾರ ಸಂಸ್ಥೆಗಳನ್ನು ನಡೆಸುತ್ತಿದ್ದರು.
ಈ ಸಂಸ್ಥೆಗಳ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿವೆ, ಇವರ ಜೊತೆ ಸಂಬಂಧ ಇಟ್ಟುಕೊಂಡವರು ಮತ್ತು ಪಾಲುದಾರಿಕೆಯಲ್ಲಿರುವ ಅನಿಲ್ ಗೌಡ ಸೇರಿದಂತೆ ಇತರರ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.

