ಬೆಳ್ತಂಗಡಿ:ಧರ್ಮಸ್ಥಳ ಪ್ರದೇಶದಲ್ಲಿ ಅಸಹಜ ಸಾವುಗಳ ಪ್ರಕರಣದ ಹಿನ್ನೆಲೆಯಲ್ಲಿ ತನ್ನ ಪುತ್ರಿ ಅನನ್ಯಾ ಭಟ್ ಕಾಣೆಯಾಗಿದ್ದು, ಬಹುಶಃ ಸಾವಿಗೀಡಾಗಿರಬಹುದು ಎಂಬ ದೂರು ನೀಡಿದ್ದ ಸುಜಾತಾ ಭಟ್ ಉಲ್ಟಾ ಹೊಡೆದಿದ್ದಾರೆ.
ಬೆಳ್ತಂಗಡಿಯಲ್ಲಿ ಎಸ್‌ಐಟಿ ಮುಂದೆ ವಿಚಾರಣೆ ಎದುರಿಸಿ, ತಾನು ಹೇಳಿದ್ದೆಲ್ಲಾ ಕಪೋಲಕಲ್ಪಿತ, ದೂರು ಸಂಪೂರ್ಣ ಸುಳ್ಳು, ನನಗೆ ತಪ್ಪಿನ ಅರಿವಾಗಿದೆ, ಕೊಟ್ಟ ದೂರು ವಾಪಸ್ ಪಡೆಯಲು ಸಿದ್ಧ ಎಂಬುದಾಗಿ ಹೇಳಿಕೆ ಕೊಟ್ಟಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕ್ಷಣಕ್ಕೊಂದು ಹೇಳಿಕೆ
ಮಾಧ್ಯಮಗಳ ಮುಂದೆ ಕ್ಷಣಕ್ಕೊಂದು ಹೇಳಿಕೆ ನೀಡುತ್ತಾ, ಅನನ್ಯಾ ಹತ್ಯೆಯಾಗಿದೆ ಎಂಬ ಭ್ರಮೆ ಹುಟ್ಟಿಸಿ, ತನಿಖೆಗೆ ಒತ್ತಾಯಿಸುವ ಮೂಲಕ ಗೊಂದಲ ಸೃಷ್ಟಿಸಿದ ಸುಜಾತ ಭಟ್ ಎಸ್‌ಐಟಿಯಿಂದ ಸತತ ವಿಚಾರಣೆಯಿಂದ ವಿಚಲಿತರಾದಂತೆ ಕಂಡುಬರುತ್ತಿದೆ.
ಈ ಪ್ರಾಯದಲ್ಲಿ ತನಿಖೆ ಎದುರಿಸಲು ಸಾಧ್ಯವಾಗದು, ನ್ಯಾಯಕ್ಕಾಗಿ ಇಷ್ಟು ದಿನ ಹೋರಾಟ ನಡೆಸಿದೆ, ಇನ್ನು ನನ್ನಲ್ಲಿ ಶಕ್ತಿ ಇಲ್ಲ, ದೂರು ಹಿಂಪಡೆಯಲು ಸಿದ್ಧ ಎಂದಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ 2003ರಲ್ಲಿ ಭೇಟಿ ನೀಡಿದ ವೇಳೆ ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿಯಾದ ನನ್ನ ಮಗಳು ಅನನ್ಯಾ ಭಟ್ ಕಾಣೆಯಾದಳು ಎಂಬುದಾಗಿ ಜುಲೈ 15, 2025ರಂದು ದೂರು ನೀಡಿದ್ದರು.
ಎಸ್‌ಐಟಿ ತನಿಖೆ
ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸರು ಆಗಸ್ಟ್ 19, 2025ರಂದು ಡಿಜಿಪಿ ಎಂ.ಎ.ಸಲೀಂ ಆದೇಶದಂತೆ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವರ್ಗಾಯಿಸಲಾಯಿತು.
ಆಗಸ್ಟ್ 26 ಹಾಗೂ 27ರಂದು ಸುಜಾತ ಭಟ್ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ತೆರಳಿ, ತನಿಖಾಧಿಕಾರಿ ಗುಣಪಾಲ ಜೆ. ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಲದ್ದಾರೆ.
ಇದೀಗ ಎಸ್‌ಐಟಿ, ಅನನ್ಯಾ ಭಟ್‌ಗೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸುವಂತೆ ಸುಜಾತಾ ಭಟ್‌ಗೆ ಸೂಚಿಸಿದೆ.

