ಮಂಡ್ಯ:ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮೇಲೆ ರಾಜ್ಯದ ಜನರಿಗೆ ನ್ಯಾಯ ದೊರಕುವ ನಿರೀಕ್ಷೆ ಇಲ್ಲದ ಕಾರಣ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕು ಎಂದು ಜಾತ್ಯತೀತ ಜನತಾದಳ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಷಡ್ಯಂತ್ರದಲ್ಲಿ ವಿದೇಶಿ ಹಣದ ಕೈವಾಡ ಶಂಕೆಯಿದೆ, ಕ್ಷೇತ್ರದ ವಿರುದ್ಧ ಜನರಲ್ಲಿ ತಪ್ಪು ಭಾವನೆ ರೂಪಿಸಲು ವಿದೇಶಿ ಹಣ ಬಳಕೆಯಾಗಿರುವ ಶಂಕೆ ಇದೆ ಎಂದರು.
ಸತ್ಯಾಸತ್ಯತೆ ಹೊರಬರಲಿ
ಸತ್ಯಾಸತ್ಯತೆ ಹೊರತರಲು ಎನ್‌ಐಎಗೆ ತನಿಖೆ ವಹಿಸುವ ಅವಶ್ಯಕತೆ ಇದೆ, ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡುವ ಒಳಸಂಚು ರೂಪಿಸಲಾಗಿದೆ ಎಂದರು.
ಪಕ್ಷ ಕೈಗೊಂಂಡಿರುವ ಧರ್ಮಸ್ಥಳ ಯಾತ್ರೆಗೆ ಹಾಸನ ಕೇಂದ್ರ ಸ್ಥಾನವಾದ್ದು, ಮುಖಂಡರು, ಕಾರ್ಯಕರ್ತರು ಇಲ್ಲಿಂದ ತೆರಳಿ, ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಲಾಗುವುದು.
ಯಾತ್ರೆಯಲ್ಲಿ ಜೆಡಿಎಸ್‌ನ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರು, ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದಾರೆ.
ಜೆಡಿಎಸ್ ಸತ್ಯಯಾತ್ರೆ
ಧರ್ಮಸ್ಥಳಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೂಚನೆಯಂತೆ ಆಗಸ್ಟ್ 31 ರಂದು ಜೆಡಿಎಸ್ ಧರ್ಮಸ್ಥಳ ಸತ್ಯಯಾತ್ರೆ ಹಮ್ಮಿಕೊಂಡಿದೆ ಎಂದರು.
ರಾಜಕೀಯ ಬೆರೆಸದೆ ಧರ್ಮಸ್ಥಳ ಸತ್ಯಯಾತ್ರೆ ನಡೆಸುತ್ತಿದ್ದೇವೆ, ಧರ್ಮ ರಕ್ಷಣೆ ಉದ್ದೇಶದಿಂದ ಯಾತ್ರೆ ಆಯೋಜಿಸಲಾಗಿದೆ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಆತಂಕ ಬೇಡ, ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದರು.

