ಬೆಂಗಳೂರು:ಜನಸಂಖ್ಯೆಗೆ ಅನುಗುಣವಾಗಿ ಬಾರ್ ಮತ್ತು ವೈನ್‌ಶಾಪ್‌ಗಳಿಗೆ ಪರವಾನಗಿ ನೀಡುವುದಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಇಂದಿಲ್ಲಿ ಘೋಷಿಸಿದ್ದಾರೆ.
ಸರ್ಕಾರಕ್ಕೆ ಹೆಚ್ಚು ಆದಾಯ ತರುವ ಉದ್ದೇಶದಿಂದ ಇಂತಹ ತೀರ್ಮಾನದ ಜೊತೆಗೆ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.
ವೈನ್‌ಶಾಪ್, ಬಾರ್‌ಗಳಿಗೆ ಪರವಾನಗಿ
ಇಲಾಖಾ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಸಿಎಲ್-2 ಮತ್ತು ಸಿಎಲ್-9ನ 571 ವೈನ್‌ಶಾಪ್ ಮತ್ತು ಬಾರ್‌ಗಳಿಗೆ ಪರವಾನಗಿ ನೀಡಲಾಗುವುದು.
ಎಂಎಸ್‌ಐಎಲ್ 571 ಮಳಿಗೆಗಳನ್ನು ನಡೆಸುತ್ತಿದ್ದು ಇವುಗಳ ಪರವಾನಗಿಯನ್ನು ಸಾರ್ವಜನಿಕ ಹರಾಜು ಮಾಡಲಾಗುವುದು.
ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜನಸಂಖ್ಯೆಗೆ ಅನುಗುಣವಾಗಿ ಹೊಸ ಬಾರ್ ಮತ್ತು ವೈನ್‌ಶಾಪ್‌ಗಳಿಗೆ ಪರವಾನಗಿ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ.
ಮದ್ಯದ ದರ ಕಡಿತ ಚಿಂತನೆ
ಸ್ಲ್ಯಾಬ್ 5ರ ನಂತರದ ಮದ್ಯದ ದರಗಳು ದುಬಾರಿಯಾಗಿದ್ದು, ಬೆಲೆ ಕಡಿತ ಮಾಡಿದರೆ ಹೆಚ್ಚು ವಹಿವಾಟಿನ ಮೂಲಕ ಸರ್ಕಾರದ ಬೊಕ್ಕಸದ ಆದಾಯ ಹೆಚ್ಚಲಿದೆ.
ನೆರೆ ರಾಜ್ಯಗಳಲ್ಲಿರುವ ಮದ್ಯದ ದರಗಳನ್ನು ಪರಿಶೀಲಿಸಿದ ನಂತರ ಪ್ರೀಮಿಯಂ ಬ್ರ್ಯಾಂಡ್ ದರಗಳನ್ನು ಪರಿಷ್ಕರಿಸಲಾಗುವುದು.
ಸರ್ಕಾರದ ಈ ಮಹತ್ವದ ತೀರ್ಮಾನಗಳಿಂದ ನೆರೆ ರಾಜ್ಯಗಳಿಂದ ಬರುವ ಮದ್ಯ ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಲು ಸಾಧ್ಯವಾಗಲಿದೆ ಎಂದರು.
ನಿರೀಕ್ಷೆ ಮೀರಿ ಆದಾಯ
ಕಳೆದ ಎರಡು ತ್ರೈಮಾಸಿಕದಲ್ಲಿ ನಮ್ಮ ಆದಾಯ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ, ನಾವು 16,290 ಕೋಟಿ ರೂ. ಸಂಗ್ರಹ ನಿರೀಕ್ಷೆ ಇತ್ತು, 16,358.76 ಕೋಟಿ ರೂ. ಸಂಗ್ರಹವಾಗಿದೆ, ಅಂದರೆ ನಿರೀಕ್ಷೆಗೂ ಮೀರಿ ಶೇಕಡ 14 ಏರಿಕೆಯಾಗಿದೆ, ಆದಾಯ ಹೆಚ್ಚಳಕ್ಕೆ ಇಲಾಖೆ ತಂದಿರುವ ಹೊಸ ಬದಲಾವಣೆಗಳೇ ಮೂಲ ಕಾರಣ.
ಲೈಸೆನ್ಸ್ ಪ್ರತೀ ವರ್ಷ ನವೀಕರಣ ಮಾಡಬೇಕಿದ್ದು, ಈಗ 5 ವರ್ಷಕ್ಕೊಮ್ಮೆ ಮಾಡಲಾಗುತ್ತಿದೆ.
ಸಿಎಲ್-7 ಪರವಾನಗಿ ನೀಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು, ಆದ್ದರಿಂದ ಕೆಲವು ಬದಲಾವಣೆ ಮಾಡಿ ತ್ವರಿತ ಅನುಮತಿ ವ್ಯವಸ್ಥೆ ಅಳವಡಿಸಲಾಗಿದೆ.
ಇಲಾಖಾ ನೇಮಕಾತಿ ಕಾರ್ಯವನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುತ್ತಿದೆ ಎಂದ ಅವರು, ಡ್ರಗ್ಸ್ ಮತ್ತು ಗಾಂಜಾ ಹಾವಳಿ ತಡೆಗೆ ಬಿಗಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

