ನವದೆಹಲಿ:ಬಿಹಾರ ವಿಧಾನಸಭಾ ಚುನಾವಣೆ ನಂತರ ಕರ್ನಾಟಕ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯಬಹುದಾದ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸೂಕ್ಷ್ಮ ಹೆಜ್ಜೆ ಇಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಪ್ರಭಾವೀ ಸಚಿವರೊಬ್ಬರು ಕಾಂಗ್ರೆಸ್‌ನ 30ಕ್ಕೂ ಹೆಚ್ಚು ಶಾಸಕರ ಜೊತೆಗೂಡಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ಬಿಜೆಪಿ ಕರ್ನಾಟಕದ ಕಡೆ ಗಮನ ಹರಿಸಿದೆ.
ಪಕ್ಷದ ವರಿಷ್ಠರಿಗೆ ವರದಿ
ಕರ್ನಾಟಕ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಅವರೇ ಕೇಂದ್ರದಲ್ಲಿನ ಪಕ್ಷದ ವರಿಷ್ಠರಿಗೆ ಕಾಲಾನುಕಾಲಕ್ಕೆ ವರದಿ ನೀಡುತ್ತಾ ಬಂದಿದ್ದಾರೆ.
ಸಿದ್ದರಾಮಯ್ಯ ಬಣಕ್ಕೆ ಸೇರಿದ ಈ ಸಚಿವರು ಸಾವಂತ್ ಅವರನ್ನು ಎರಡು-ಮೂರು ಬಾರಿ ಭೇಟಿ ಮಾಡಿ ಸರ್ಕಾರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆ ನಂತರವೇ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ಸಂಪುಟದಲ್ಲಿ ರಾಜ್ಯ ಪ್ರತಿನಿಧಿಸುತ್ತಿರುವ ಪ್ರಲ್ಹಾದ್ ಜೋಷಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯಲ್ಲಿನ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರಿಂದ ಕರ್ನಾಟಕ ರಾಜಕೀಯ ಕುರಿತು ಪ್ರತ್ಯೇಕವಾಗಿ ಮಾಹಿತಿ ಪಡೆದುಕೊಂಡಿದ್ದಾರೆ.
ರಾಜಕೀಯ ಕ್ರಾಂತಿ
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ಬಹಿರಂಗ ಹೇಳಿಕೆ ನೀಡಿದ್ದರು.
ರಾಜಣ್ಣ ಅವರನ್ನು ಸಂಪುಟದಿಂದ ಪಕ್ಷದ ವರಿಷ್ಠರೇ ವಜಾಗೊಳಿಸಿದ ನಂತರ ಅವರು ಶಿವಕುಮಾರ್ ವಿರುದ್ಧ ಬಹಿರಂಗವಾಗಿಯೇ ರಾಜಕೀಯ ಕದನಕ್ಕೆ ಇಳಿದಿದ್ದಾರೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಣಕ್ಕೆ ಸೇರಿದ ಶಾಸಕರು ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಿರುವ ಬೆನ್ನಲ್ಲೇ ಪ್ರಮೋದ್ ಸಾವಂತ್ ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿದಂತೆ ಮುಖಾಮುಖಿ ಚರ್ಚೆ ಮಾಡಿದ್ದಾರೆ.
ಸಾವಂತ್ ಪ್ರಮುಖ ರೂವಾರಿ
ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರಲು ಸಾವಂತ್ ಅವರೇ ಪ್ರಮುಖ ರೂವಾರಿ, ಅಲ್ಲದೆ, ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಭಿನ್ನಾಭಿಪ್ರಾಯದಿಂದ ಪತನಗೊಂಡಾಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರಲು ಗೋವಾ ಮುಖ್ಯಮಂತ್ರಿ ಅವರೇ ತಮ್ಮ ರಾಜಕೀಯ ಚಾಣಕ್ಯತನ ತೋರಿದ್ದರು.
ಸಿದ್ದರಾಮಯ್ಯ ಆಡಳಿತದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಮತ್ತೊಮ್ಮೆ ಸಾವಂತ್ ರಂಗ ಪ್ರವೇಶ ಮಾಡಿದ್ದಾರೆ.

