ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಲಾಭಕ್ಕಾಗಿ ಒಳಮೀಸಲಾತಿ ಜಾರಿ ಮಾಡಿದ್ದು, ಸುಪ್ರೀಂಕೋರ್ಟ್ ಆದೇಶ ಹಾಗೂ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ಪಾಲಿಸದೇ ಸಾಮಾಜಿಕ ಅನ್ಯಾಯ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಂಚಿತ ಸಮುದಾಯಗಳಿಗೆ ನ್ಯಾಯ ದೊರಕಿಸಲು ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಪೂನಾ ಫ್ಯಾಕ್ಟ್
ಡಾ.ಬಿ.ಆರ್.ಅಂಬೇಡ್ಕರ್ ಕಾಲದಲ್ಲಿ ತುಳಿತಕ್ಕೊಳ್ಳಗಾದವರಿಗೆ ನ್ಯಾಯ ಕೊಡಿಸಲು ಪೂನಾ ಒಪ್ಪಂದ (ಪೂನಾ ಫ್ಯಾಕ್ಟ್) ಮಾಡಿಕೊಳ್ಳಲಾಯಿತು, ಸಂವಿಧಾನ ರಚನೆ ವೇಳೆ ಒಪ್ಪಂದದ ಆಧಾರದಲ್ಲಿ ಮೀಸಲಾತಿ ತೀರ್ಮಾನ ಮಾಡಲಾಯಿತು.
ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಒತ್ತು ಕೊಟ್ಟಿತು, ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಸೇರಿಸಿರುವ ಅಂಶಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.
ಸಮುದಾಯಕ್ಕೆ ತಕ್ಕಂತೆ ಮೀಸಲಾತಿ ನಿರಂತರ ನೀಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು, ಕಾಂಗ್ರೆಸ್ ಎಸ್‌ಸಿ ಸಮುದಾಯಗಳನ್ನು ಸೇರಿಸಿತು, ಆದರೆ, ಮೀಸಲಾತಿ ಹೆಚ್ಚಳ ಮಾಡಲಿಲ್ಲ.
ಕಾಂಗ್ರೆಸ್‌ನಿಂದ ಅನ್ಯಾಯ
ರಾಜ್ಯದಲ್ಲಿ ಎಸ್‌ಸಿ ಪ್ರವರ್ಗದಲ್ಲಿ ಆರು ಜಾತಿ ಇದ್ದದ್ದು ಈಗ 101 ಜಾತಿಗಳಾಗಿವೆ, ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡದೇ ಅನ್ಯಾಯ ಮಾಡಿತು, ಇದರಿಂದ ಅಸಮಾಧಾನ ಹೆಚ್ಚಾಯಿತು, ಒಳ ಮೀಸಲಾತಿಗೆ ಆಂಧ್ರದಲ್ಲಿ ಚಳವಳಿ ಆರಂಭವಾಗಿ ಕರ್ನಾಟಕಕ್ಕೂ ಹಬ್ಬಿತು ಎಂದರು.
ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಮೂರ್ತಿ ನಾಗಮೋಹದಾಸ್ ಸಮಿತಿ ರಚನೆ ಮಾಡಲಾಯಿತು, ವರದಿ ಸಲ್ಲಿಕೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಲ ಮಿತಿ ನಿಗದಿ ಮಾಡಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ನವೆಂಬರ್ 2022ರಲ್ಲಿ ಎಸ್‌ಸಿ ಶೇ.15 ರಿಂದ ಶೇ.17ಕ್ಕೆ ಹೆಚ್ಚಳ ಮಾಡಿದೆ, ಎಸ್‌ಟಿಗೆ ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡಿದೆವು, ಅದು ಲ್ಯಾಂಡ್ ಮಾರ್ಕ್ ತೀರ್ಮಾನವಾಗಿದೆ.
ಸಂವಿಧಾನ ತಿದ್ದುಪಡಿ
ಆಗ ಪ್ರತಿ ಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮೀಸಲಾತಿ ಹೆಚ್ಚಳ ಆಗಿಲ್ಲವೆಂದು ಹೇಳುತ್ತಿದ್ದರು, ಸಂವಿಧಾನ ತಿದ್ದುಪಡಿ ಆಗಬೇಕು ಎಂದಿದ್ದರು, ಮುಖ್ಯಮಂತ್ರಿ ಆದಾಗಲೂ ಅದನ್ನೇ ಹೇಳಿದರು.
ಒಳ ಮೀಸಲಾತಿ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯಗಳಿಗೆ ನೀಡಿತು, ಆದೇಶದ ಪ್ರಕಾರ ನಿಖರ ಡಾಟಾ ಇರಬೇಕು, ಅಸಮರ್ಥರನ್ನು ಪ್ರಾಬಲ್ಯ ಇದ್ದವರ ಜೊತೆ ಸೇರಿಸಬಾರದು ಎಂದು ಹೇಳಿತು.
ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ರಚನೆ ಮಾಡಿತು, ಆದರೆ, ಸರ್ಕಾರ ನ್ಯಾ.ನಾಗಮೋಹನ ದಾಸ್ ವರದಿ, ನ್ಯಾ.ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಎಲ್ಲವನ್ನು ಕೈ ಬಿಟ್ಟು, ಎಸ್‌ಸಿ ಪ್ರವರ್ಗ ಎಗೆ ಶೇ.6, ಎಸ್‌ಸಿ ಪ್ರವರ್ಗ ಬಿಗೆ ಶೇ.6 ಹಾಗೂ ಎಸ್‌ಸಿ ಪ್ರವರ್ಗ ಸಿಗೆ ಶೇ.5 ಮೀಸಲಾತಿ ವರ್ಗಿಕರಿಸಿ ರಾಜಕೀಯ ನಿರ್ಣಯ ಮಾಡಿತು.
ಅಲೆಮಾರಿಗಳಿಗೆ ಶೇ.1 ಮೀಸಲಾತಿ
ಇದನ್ನೇ ಮಾಡುವುದಾದರೆ ಆಯೋಗ ಮಾಡುವ ಅಗತ್ಯವೇನಿತ್ತು, ಅಲೆಮಾರಿಗಳಿಗೆ ಶೇ.1 ಮೀಸಲಾತಿ ಕೊಡಬೇಕೆಂದು ಮಾಧುಸ್ವಾಮಿ ಹಾಗೂ ನಾಗಮೋಹನ ದಾಸ್ ವರದಿಯಲ್ಲಿ ತಿಳಿಸಿದ್ದರೂ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಸುಪ್ರೀಂಕೋರ್ಟ್ ಆದೇಶ ಪಾಲಿಸದೆ ಸಾಮಾಜಿಕ ಅನ್ಯಾಯ ಮಾಡಿದ್ದಾರೆ ಎಂದರು.
ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಲಿಲ್ಲ, ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಅಂತ ಇದ್ದುದನ್ನು ತಿರಸ್ಕರಿಸಿದರು, ಅಲೆಮಾರಿಗಳು ಅತ್ಯಂತ ಕನಿಷ್ಠ ಜೀವನ ಸ್ಥಿತಿಯಲ್ಲಿದ್ದಾರೆ, ಅವರಿಗೆ ಯಾವುದೇ ಮೀಸಲಾತಿ ಇಲ್ಲ.
ರಾಜ್ಯ ಸರ್ಕಾರದ ಒಳ ಮೀಸಲಾತಿ ತೀರ್ಮಾನದಿಂದ ಯಾರೂ ಸಂತುಷ್ಠರಾಗಿಲ್ಲ, ಎಸ್‌ಸಿ ಬಲಗೈ ಸಮುದಾಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ, ಲಂಬಾಣಿ ಬೋವಿ ಜೊತೆಗೆ 59 ಜಾತಿಗಳನ್ನು ಸೇರಿಸಲಾಗಿದೆ, ರಾಜಕೀಯ ನಿರ್ಣಯ ಕೈಗೊಂಡಿದ್ದೇವೆ ನೀವು ಬೇಕಾದರೆ ಕೋರ್ಟ್‌ಗೆ ಹೋಗಿ ಎಂದು ಸರ್ಕಾರ ಹೇಳುತ್ತಿದೆ, ಇದು ಬಗೆಹರಿಯದ ಕಗ್ಗಂಟಾಗಿದೆ.
ಜನರ ಕ್ಷಮೆ ಕೇಳುವಿರಾ
ನಾವು ಮೀಸಲಾತಿ ಹೆಚ್ಚಳ ಮಾಡಿದ್ದಾಗ ಸಿದ್ದರಾಮಯ್ಯ ವಿರೋಧಿಸಿದರು, ಈಗ ಅದೇ ಆಧಾರದಲ್ಲಿ ಒಳ ಮೀಸಲಾತಿ ನೀಡಿರುವುದಕ್ಕೆ ಜನರ ಕ್ಷಮೆ ಕೇಳುವಿರಾ, ಅಥವಾ ಇನ್ನೊಂದು ಪರ್ಸೆಂಟ್ ಹೆಚ್ಚಳ ಮಾಡಿ ನ್ಯಾಯ ಕೊಡಿಸುತ್ತೀರಾ.
ಪ್ಯಾಕೆಜ್ ಕೊಡುವ ಮಾತನಾಡುತ್ತಾರೆ, ಇದೇನು ವ್ಯವಹಾರಿಕ ಡೀಲ್ ಅಲ್ಲ, ಸಮುದಾಯಗಳಿಗೆ ಶಾಶ್ವತ ನ್ಯಾಯ ಕೊಡಬೇಕು.
ಮೀಸಲಾತಿ ಇನ್ನೊಮ್ಮೆ ಪರಿಷ್ಕರಿಸಿ
ನಾಗಮೋಹನ ದಾಸ್ ವರದಿ ಒಪ್ಪಿಕೊಳ್ಳಬೇಕು, ಇನ್ನೊಂದು ಪರ್ಸೆಂಟ್ ಹೆಚ್ಚಳ ಮಾಡಿ ಅಲೆಮಾರಿಗಳಿಗೆ ನೀಡಿ, ಬೋವಿ, ಲಂಬಾಣಿಗೆ ನೀಡಿರುವ ಮೀಸಲಾತಿ ಇನ್ನೊಮ್ಮೆ ಪರಿಷ್ಕರಿಸಿ, ಎಕೆ, ಎಡಿ, ಎಎ ಸಮುದಾಯಗಳಿಗೆ ನ್ಯಾಯ ಕೊಡಬೇಕು.
ಶಿಕ್ಷಣ, ನೇಮಕಾತಿ, ಬಡ್ತಿ ಎಲ್ಲದರಲ್ಲೂ ಒಳ ಮೀಸಲಾತಿ ಪಾಲನೆಯಾಗಬೇಕು, ಬಿಜೆಪಿ ಎಲ್ಲ ಸಮುದಾಯಗಳ ಜೊತೆ ನಿಲ್ಲುತ್ತದೆ, ನ್ಯಾಯ ಕೊಡಿಸಲು ಪ್ರಯತ್ನಿಸಲಿದೆ, ಸರ್ಕಾರಿ ಮಟ್ಟದಲ್ಲಿ ಪರಿಹರಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.

