ಬೆಂಗಳೂರು:ಆಡಳಿತಾರೂಢ ಕಾಂಗ್ರೆಸ್‌ನ ಮೂವರು ಶಾಸಕರು ಜೈಲುಪಾಲಾಗಿದ್ದರೆ, ಇನ್ನು ಕೆಲವರು ಅದೇ ಹಾದಿಯಲ್ಲಿದ್ದಾರೆ.
ಕೊಲೆ, ಅಕ್ರಮ ಗಣಿಗಾರಿಕೆ ಹಾಗೂ ಆನ್‌ಲೈನ್ ಗೇಮ್ಸ್ ಆರೋಪದ ಮೇಲೆ ವಿನಯ್ ಕುಲಕರ್ಣಿ, ಸತೀಶ್ ಸೈಲ್ ಹಾಗೂ ವೀರೇಂದ್ರ ಪಪ್ಪಿ ಜೈಲು ಸೇರಿದ್ದಾರೆ.
ಅಕ್ಟೋಬರ್-ನವೆಂಬರ್ ವೇಳೆಗೆ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗುವುದಕ್ಕೂ ಮುನ್ನ ಕೆಲವು ಆರೋಪಗಳ ಮೇಲೆ ಕಾಂಗ್ರೆಸ್ ಶಾಸಕರು ಜಾರಿ ನಿರ್ದೇಶನಾಲಯ (ಇ.ಡಿ.) ಇಕ್ಕಳದಲ್ಲಿ ಸಿಲುಕುವ ಲಕ್ಷಣಗಳು ಕಂಡುಬರುತ್ತಿವೆ.
ಬೇಲ್ ಮೇಲೆ
ಮಹರ್ಷಿ ವಾಲ್ಮೀಕಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಿ.ನಾಗೇಂದ್ರ ಜೈಲು ಪಾಲಾಗಿ ಈಗ ಬೇಲ್ ಮೇಲೆ ಹೊರಗಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಅಂದಿನ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂದೆ ಪಡೆದಿದ್ದಲ್ಲದೆ, ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಸ್ವಯಂ ಪ್ರೇರಿತವಾಗಿ ಸಿಬಿಐ ಕರ್ನಾಟಕದಲ್ಲಿ ಯಾವುದೇ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿತ್ತು.
ಸರ್ಕಾರ ಮಣಿಯಲಿಲ್ಲ
ಸರ್ಕಾರದ ನಿರ್ಧಾರದ ನಂತರ ಹಗರಣಗಳು ನಡೆದಿವೆ ಎಂಬ ಆರೋಪದ ಮೇಲೆ ಸಿಬಿಐಗೆ ವಹಿಸುವಂತೆ ಒತ್ತಡ ಬಂದರೂ ಸರ್ಕಾರ ಮಣಿಯಲಿಲ್ಲ.
ಆದರೆ, ಕೇಂದ್ರ ಸರ್ಕಾರ ಭ್ರಷ್ಟಾಚಾರ ಆರೋಪಗಳು ಕೇಳಿಬಂದಾಗಲೆಲ್ಲಾ ಸಿಬಿಐ ಬದಲು ಇ.ಡಿ. ಮೂಲಕ ಸತ್ಯಾಸತ್ಯತೆ ಬಯಲು ಮಾಡಲು ಮುಂದಾಗಿದೆ.
ಬಿ.ನಾಗೇಂದ್ರ, ಸತೀಶ್ ಸೈಲ್ ಹಾಗೂ ವೀರೇಂದ್ರ ಪಪ್ಪಿ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಇ.ಡಿ.ಯೇ ತನಿಖೆ ಮಾಡಿ ಜೈಲಿಗಟ್ಟಿದೆ.
ಶಾಸಕರಲ್ಲಿ ನಡುಕ
ಇದೇ ರೀತಿ ಇನ್ನೂ ಹಲವಷ್ಟು ಪ್ರಕರಣಗಳಲ್ಲಿ ಇ.ಡಿ. ಮಾಹಿತಿ ಕಲೆ ಹಾಕುತ್ತಿದ್ದು ಕೆಲವು ಶಾಸಕರಲ್ಲಿ ನಡುಕ ಉಂಟು ಮಾಡಿದೆ.
ಸಿಬಿಐನಷ್ಟೇ ಬಲವಾಗಿ ಇ.ಡಿ. ಕೂಡಾ ಕಾರ್ಯನಿರ್ವಹಿಸುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಸಿಬಿಐ ತನಿಖೆ ನಿರಾಕರಿಸುವ ತೀರ್ಮಾನದಂತೆ ಇ.ಡಿ. ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ, ಹೀಗಾಗಿ ಬಲವಾದ ಆರೋಪ ಹೊತ್ತಿರುವವರು ಒಬ್ಬರ ನಂತರ ಒಬ್ಬರು ಜೈಲಿಗೆ ಹೋಗುವಂತಾಗಿದೆ.
ಶಿವಕುಮಾರ್ ಕೆಂಡ
ಪಕ್ಷದ ಶಾಸಕರೇ ಇ.ಡಿ. ಬಲೆಗೆ ಬೀಳುತ್ತಿರುವ ಬಗ್ಗೆ ಕೆಂಡ ಕಾರಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ನಮ್ಮ ಕಾಂಗ್ರೆಸ್ ಶಾಸಕರ ಮೇಲೆ ಮಾತ್ರ ಇಂತಹ ತನಿಖೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುವ ಉದ್ದೇಶದಿಂದಲೇ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

