ಬೆಂಗಳೂರು:ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾಗಿ ಮೈಸೂರು ಜಯದೇವ ಹೃದ್ರೋಗ ಘಟಕದ ಮುಖ್ಯಸ್ಥ ಡಾ. ದಿನೇಶ್ ಬಿ. ನೇಮಕವಾಗಿದ್ದಾರೆ.
ಡಾ.ಮಂಜುನಾಥ್ ನಿವೃತ್ತಿ ನಂತರ ನಿರ್ದೇಶಕ ಸ್ಥಾನಕ್ಕೆ ಯಾರನ್ನೂ ಸರ್ಕಾರ ನೇಮಿಸಿರಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ಸಹಾಧ್ಯಕ್ಷರಾಗಿರುವ ಆಯ್ಕೆ ಸಮಿತಿ ನಡೆಸಿದ ನೇಮಕಾತಿ ಪ್ರಕ್ರಿಯೆ ನಂತರ ಡಾ.ದಿನೇಶ್ ಅವರನ್ನು ಜಯದೇವ ಸಂಸ್ಥೆ ನಿರ್ದೇಶಕರನ್ನಾಗಿ ನೇಮಿಸಲು ತೀರ್ಮಾನಿಸಿ ಇಂದು ಸರ್ಕಾರ ಆದೇಶ ಹೊರಡಿಸಿದೆ.
ಅಧಿಕಾರ ಸ್ವೀಕಾರ
ಆದೇಶ ಹೊರಬೀಳುತ್ತಿದ್ದಂತೆ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಬಿ.ಸಿ.ಭಗವಾನ್ ಹಾಗೂ ನವದೆಹಲಿ ಏಮ್ಸ್‌ನ ಡಾ.ನಿತೀಶ್ ನಾಯಕ್, ತಿರುವನಂತಪುರಂ ಚೈತನ್ಯ ಉನ್ನತ ಶಿಕ್ಷಣ ಸಂಸ್ಥೆಯ ಡಾ. ಹರಿಕೃಷ್ಣನ್ ಸೇರಿದಂತೆ ಇತರೆ ಸದಸ್ಯರ ಆಯ್ಕೆ ಸಮಿತಿ ಡಾ.ದಿನೇಶ್ ಅವರನ್ನು ಆಯ್ಕೆ ಮಾಡಿತು.
ಮೈಸೂರಿನ ತಿರಮಕೂಡಲು ನರಸೀಪುರದ ಸೋಸಲೆ ಹೋಬಳಿ ದೊಡ್ಡೆಬಾಗಿಲು ಗ್ರಾಮದ ಡಾ.ದಿನೇಶ್ ಮೈಸೂರಿನಲ್ಲಿ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪೂರೈಸಿದರು.
ಹಲವೆಡೆ ಸೇವೆ
ವೈದ್ಯಾಧಿಕಾರಿಯಾಗಿ, ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಲೆಕ್ಚರರ್ ಆಗಿ, ಅಸಿಸ್ಟೆಂಟ್ ಪ್ರೊಫೆಸರ್, ಕೆ.ಆರ್.ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿ ಹಾಗೂ ಹಾಲಿ ಜಯದೇವ ಸಂಸ್ಥೆಯ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಘಟಕದ ಮುಖ್ಯಸ್ಥರಾಗಿದ್ದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಟ್ಸ್ (ಐಎಂಎ), ಅಸೋಸಿಯೇಟ್ಸ್ ಆಫ್ ಫಿಸಿಷಿಯನ್, ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾದ ಖಾಯಂ ಸದಸ್ಯರಾಗಿರುವ ಡಾ.ದಿನೇಶ್, ಡಾಕ್ಟರ್ಸ್ ಕೋ ಆಪರೇಟಿವ್ ಸೊಸೈಟಿ, ರೀಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

