ಬೆಂಗಳೂರು:ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ಕನಸು ಕಾಣುತ್ತಿರುವ ರಾಜ್ಯ ಬಿಜೆಪಿ ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ಮತ್ತು 18 ರಂದು ವಿಶೇಷ ಕಾರ್ಯಾಗಾರ ನಡೆಸಲು ತೀರ್ಮಾನಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಆದೇಶದ ಮೇರೆಗೆ ಈ ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಹಮ್ಮಿಕೊಂಡಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಅಮಿತ್ ಷಾ, ತಮ್ಮ ಸಂಪುಟ ಸಹೋದ್ಯೋಗಿ ಪ್ರಲ್ಹಾದ್ ಜೋಷಿ ಸಮ್ಮುಖದಲ್ಲಿ ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ಮಾಡಿದ್ದರು.
ಕಾಂಗ್ರೆಸ್‌ಲ್ಲಿ ಅಧಿಕಾರ ಹಂಚಿಕೆ ಕಿತ್ತಾಟ
ಆಡಳಿತಾರೂಢ ಕಾಂಗ್ರೆಸ್‌ಲ್ಲಿ ಅಧಿಕಾರ ಹಂಚಿಕೆ ಕಿತ್ತಾಟ ಭುಗಿಲೇಳುವ ದಿನಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂಬುದು ಈ ನಾಯಕರ ಲೆಕ್ಕಾಚಾರ.
ಇದಕ್ಕೆ ಈಗಿನಿಂದಲೇ ಉಪಚುನಾವಣಾ ಸಮರ ಸಿದ್ಧತೆಗೆ ಈ ತಿಂಗಳ 17 ಮತ್ತು 18 ರಂದು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ವಿಶೇಷ ಕಾರ್ಯಾಗಾರ ನಡೆಸಿ ಸೂಕ್ತ ಸಂದೇಶ ರವಾನಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಕಾರ್ಯಾಗಾರಕ್ಕೆ ವಿಧಾನಮಂಡಲದ ಎರಡೂ ಸದನಗಳ ಬಿಜೆಪಿ ಸದಸ್ಯರು, ರಾಜ್ಯಸಭೆ, ಲೋಕಸಭೆ ಸದಸ್ಯರು ಮತ್ತು ಕಳೆದ ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳನ್ನೂ ಆಹ್ವಾನಿಸಲಾಗುತ್ತಿದೆ.
ಸಮರ ಸಿದ್ಧತೆಗೆ ಸೂಚನೆ
ರಾಜ್ಯ ಪ್ರಮುಖರ ಸಭೆಯಲ್ಲಿ ಅಮಿತ್ ಷಾ ಮಾಹಿತಿ ಹಂಚಿಕೊಂಡಿದ್ದಲ್ಲದೆ, ಸಮರ ಸಿದ್ಧತೆಗೆ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಮಿತ್ರ ಪಕ್ಷ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜೊತೆ ಅಮಿತ್ ಷಾ ಸಭೆ ನಡೆಸಿದ್ದರು.
ವಿಧಾನಸಭೆಗೆ ಮಧ್ಯಂತರ ಚುನಾವಣೆ ತಯಾರಿಯಲ್ಲಿ ಪ್ರತಿ ಮತದಾರರ ಮನೆ ತಲುಪುವುದು ಸೇರಿದಂತೆ ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ರಾಜಕೀಯ ಸಂಘರ್ಷ
ಮುಖ್ಯಮಂತ್ರಿ ಗಾದಿಗೇರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಯಾರಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರಾಜಕೀಯ ಸಂಘರ್ಷ ನಡೆಯುವ ಲಕ್ಷಣಗಳು ಕಂಡುಬರುತ್ತಿವೆ.
ಈ ಸಮರದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾದರೆ ಮಧ್ಯಂತರ ಚುನಾವಣೆ ಅನಿವಾರ್ಯ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ.

