ಮೈಸೂರು:ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಒಳಗೊಂಡ ಜಾತಿಗಣತಿ ಸಮೀಕ್ಷೆ ವೇಳೆ ಮತಾಂತರಗೊಂಡವರು ಅನುಸರಿಸುತ್ತಿರುವ ಸದ್ಯದ ಜಾತಿಯನ್ನೇ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿನ ವ್ಯವಸ್ಥೆ ಪರಿಣಾಮವಾಗಿ ಮತಾಂತರಗೊಳ್ಳುತ್ತಾರೆ, ಹಿಂದೂ ಸಮಾಜದಲ್ಲಿ ಸಮಾನತೆ, ಸಮಾನ ಅವಕಾಶಗಳಿದ್ದರೆ, ಏಕೆ ಮತಾಂತರಗೊಳ್ಳುತ್ತಿದ್ದರು ಎಂದು ಪ್ರಶ್ನಿಸಿದರು.
ಮತಾಂತರ ಅವರ ಹಕ್ಕು
ಅಸ್ಪೃಶ್ಯತೆ ಏಕೆ ಬಂತು, ಅದನ್ನು ನಾವು ಹುಟ್ಟುಹಾಕಿದ್ದೇವೆಯೇ, ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದಲ್ಲಿ ಇದ್ದರೂ ಮತಾಂತರವಾಗಿದ್ದಾರೆ, ಅದು ಅವರ ಹಕ್ಕು ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ವಿಳಂಬವಾಗುತ್ತಿಲ್ಲ, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಹಾಗೆಂದು ಅನಗತ್ಯ ವಿಳಂಬ ಮಾಡುವಂತಿಲ್ಲ, ತಮಗೆ ತಿಳಿದಂತೆ ವಿಳಂಬವಾಗುತ್ತಿಲ್ಲ.
ದಸರಾ ಉದ್ಘಾಟಕರ ವಿಷಯ ನ್ಯಾಯಾಲಯದ ಮುಂದಿದ್ದು ಅಲ್ಲೇ ಇತ್ಯರ್ಥವಾಗಲಿ, ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ, ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ.
ದಸರಾ ನಾಡಹಬ್ಬ
ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ನಿಯಮ ಇಲ್ಲ, ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು.
ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಶಾಂತಿಗೆ ಭಂಗ ತರುವ ಕೆಲಸ ಮಾಡಿದರೆ ಪೋಲಿಸ್ ಕ್ರಮ ಕೈಗೊಳ್ಳುತ್ತಾರೆ.
ಪ್ರಚೋಧನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ ಸಿ.ಟಿ.ರವಿ, ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ, ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವುದು ಅತ್ಯಂತ ಅವಶ್ಯಕ.
ಪ್ರಚೋದನಾಕಾರಿ ಭಾಷಣ ವಿರುದ್ಧ ಕ್ರಮ
ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಇದು ರಾಜಕಾರಣವಲ್ಲ, ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಮಾಡುತ್ತಿಲ್ಲ, ನಾನೂ ಒಬ್ಬ ಹಿಂದೂ, ನನ್ನ ಹೆಸರಿನಲ್ಲಿ ಈಶ್ವರ ಮತ್ತು ರಾಮ ಎರಡೂ ದೇವರ ಹೆಸರಿದೆ ಎಂದರು.
ಆಲಮಟ್ಟಿ ಅಣೆಕಟ್ಟೆಯನ್ನು 519 ಮೀ.ಗಳಿಂದ 524 ಮೀ.ಗೆ ಎತ್ತರಿಸಲು ೨೦೧೦ರಲ್ಲಿ ನ್ಯಾಯಮಂಡಳಿಯೇ ಹೇಳಿದೆ, 15 ವರ್ಷಗಳಾದರೂ ರಾಜಕಾರಣಕ್ಕಾಗಿ ಮಹಾರಾಷ್ಟ್ರ ಆಕ್ಷೇಪ ತೆಗೆದಿದೆ.
ಗೋವಾ ಸರ್ಕಾರ ಮಹದಾಯಿ ಯೋಜನೆಯನ್ನು, ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದು, ಈ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿಯೇ ತಿಳಿಹೇಳಬೇಕು ಎಂದರು.

