ಕಲಬುರಗಿ:ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಲ್ಲಿ ಆಶಾಕಿರಣ ಮೂಡಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಬೆಳೆಗಳು ನೀರು ಪಾಲಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೃಷಿ ಸಾಲ ಮನ್ನಾ ಮಾಡಬೇಕೆಂಬ ಕೂಗುಗಳು ಕೇಳಿಬರುತ್ತಿವೆ.
ವಾಡಿಕೆಗಿಂತ ಹೆಚ್ಚು ಮಳೆ
ಜಾಮರಾಜನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ಅದರಲ್ಲೂ ಮುಂಗಾರು ಪೂರ್ವ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಷ್ಟರ ನಡುವೆಯೂ ರಾಜ್ಯಾದ್ಯಂತ ಬಿತ್ತನೆ ಚುರುಕುಗೊಂಡು ಈ ಬಾರಿ ಆಹಾರಧಾನ್ಯಗಳ ಉತ್ಪಾದನೆ ಹೆಚ್ಚುವ ಸಾಧ್ಯತೆ ಇದೆ, ಇಂತಹ ಸನ್ನಿವೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೊ ಸಂವಾದದ ಮೂಲಕ ಪ್ರತಿ ಜಿಲ್ಲಾಡಳಿತದಿಂದ ಮಾಹಿತಿ ಪಡೆದಿದ್ದೇನೆ, ಜಂಟಿ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬೆಳೆ ನಷ್ಟ ಪ್ರಮಾಣ ವರದಿ
ವರದಿ ಬಂದ ನಂತರ ಬೆಳೆ ನಷ್ಟ ಪ್ರಮಾಣ ದೊರೆಯಲಿದ್ದು ಪರಿಹಾರ ನೀಡಲು ಸಹಕಾರಿಯಾಗಲಿದೆ ಎಂದರು.
ನಾವು ರೈತರ ಪರ ಇದ್ದೇವೆ, ಕೇಂದ್ರ ಸರ್ಕಾರ ನಮ್ಮ ಯಾವುದೇ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, ಕಳೆದ ವರ್ಷ ಪ್ರವಾಹ ಪರಿಹಾರವನ್ನೂ ನೀಡಲಿಲ್ಲ.
ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಾಗ ನ್ಯಾಯಾಲಯದ ಮೊರೆ ಹೋಗಿ ಪರಿಹಾರ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು ಎಂದರು.
ಜಂಟಿ ಸಮೀಕ್ಷೆ ನಂತರ ಪರಿಹಾರ
ಮಾನವ-ಜಾನುವಾರು ಜೀವ ಹಾನಿಗಳಿಗೆ ಶೇ.100 ರಷ್ಟು ಪರಿಹಾರ ಒದಗಿಸಿರುವ ರೀತಿಯಲ್ಲೇ ಅತಿವೃಷ್ಟಿಯಿಂದ ಬೆಳೆ ಹಾನಿ ಕುರಿತ ಜಂಟಿ ಸಮೀಕ್ಷೆ ನಂತರ ಸಮರ್ಪಕ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆ ಆಗಿದೆ, ವಾಡಿಕೆಗಿಂತ ಶೇ.17ರಷ್ಟು ಮಳೆ ಹೆಚ್ಚಾಗಿದೆ, 37 ಮಾನವ ಜೀವ ಹಾನಿ ಪ್ರಕರಣಗಳು ವರದಿಯಾಗಿದ್ದು, ಪರಿಹಾರ ವಿತರಿಸಲಾಗಿದೆ.
ಜಾನುವಾರು ಪ್ರಾಣ ಹಾನಿಯ 175 ಪ್ರಕರಣ ವರದಿಯಾಗಿವೆ, ಎಲ್ಲದಕ್ಕೂ ಪರಿಹಾರ ನೀಡಲಾಗಿದೆ, ಸಂಪೂರ್ಣ ಹಾಗೂ ಭಾಗಶಃ ಮನೆ ಹಾನಿ ಪ್ರಕರಣಗಳಲ್ಲೂ ಪರಿಹಾರ ಒದಗಿಸಲಾಗಿದೆ ಎಂದರು.
ಹಲವು ಜಿಲ್ಲೆಗಳ ಮಾಹಿತಿ
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರೀ ಮಳೆಯಿಂದಾಗಿ ಬೆಳೆ ಹಾನಿ ಜಂಟಿ ಸಮೀಕ್ಷೆಗೆ ಅಡ್ಡಿಯಾಗುತ್ತಿದೆ, ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ಮಳೆ ನಿಂತ ಬಳಿಕ ಎಂಟತ್ತು ದಿನಗಳಲ್ಲಿ ಸಮೀಕ್ಷೆ ಮುಗಿಯಲಿದೆ ಎಂದರು.

